ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರಾದ ಪ್ರಭಾ ಅತ್ರೆ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪ್ರಭಾ ಅತ್ರೆ ಅವರಿಗೆ 92 ವರ್ಷ ವಯಸ್ಸಾಗಿತ್ತು. ಶನಿವಾರ ಬೆಳಗ್ಗೆ ಪ್ರಭಾ ಅವರಿಗೆ ನಿದ್ರಿಸುವಾಗಲೇ ಹೃದಯಾಘಾತವಾಗಿದೆ. ಈ ಹಿನ್ನೆಲೆ, ಕೂಡಲೇ ಅವರನ್ನು ನಗರದ ಕೊತ್ರುಡ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 5.30 ಕ್ಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಭಾ ಅವರು ಪುಣೆಯಲ್ಲಿ ನೆಲೆಸಿದ್ದರು. ಇವರ ಕುಟುಂಬದ ಕೆಲವರು ವಿದೇಶದಲ್ಲಿ ನೆಲೆಸಿರುವ ಕಾರಣ ಅವರು ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜ.17ರಂದು ಟಿ-20 ಕ್ರಿಕೆಟ್ : ಹೆಚ್ಚುವರಿ ಬಸ್ ಸೇವೆ ಒದಗಿಸಿದ ಬಿಎಂಟಿಸಿ
ಪ್ರಭಾ ಅತ್ರೆ ಅವರ ಜೀವನ
ಪ್ರಭಾ ಅತ್ರೆ ಅವರು ಸೆಪ್ಟೆಂಬರ್ 13ರ 1932 ರಂದು ಪುಣೆಯಲ್ಲಿ ಜನಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕಿಯರಲ್ಲಿ ಇವರು ಒಬ್ಬರು. ಇವರು ಹೀರಾಬಾಯಿ ಬಡೋದೆಕರ ಅವರ ಶಿಷ್ಯೆ. ಸಂಗೀತದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿರುವ ಇವರು ಸಂಗೀತದ ಶಿಕ್ಷಕರು.
ಕಾನೂನು ಪದವೀಧರರಾಗಿದ್ದ ಅವರು ಸಂಗೀತದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಇವರು ಶಿಕ್ಷಣ ತಜ್ಞೆಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದರು.
ಇವರಿಗೆ 1990ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ ಪ್ರಶಸ್ತಿ, 1991ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಲ್ಲದೆ ಕಾಳಿದಾಸ್ ಸಮ್ಮಾನ್, ದೀನನಾಥ ಮಂಗೇಶ್ಕರ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.