ಮಲೇಬೆನ್ನೂರಿನ ಜುಮ್ಮಾ ಮಸೀದಿ ಸುನ್ನಿ ಆಡಳಿತಾಧಿಕಾರಿಯು ಹುದ್ದೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಸಂಪೂರ್ಣ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ನಾಡು ಜನತಾ ಸಮಿತಿಯ ಅಧ್ಯಕ್ಷ ದಸ್ತಗೀರ್ ಎಸ್. ಅಸಾದುಲ್ಲ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು ಮಲೇಬೆನ್ನೂರು, ಹೊನ್ನಾಳಿ ಹಾಗೂ ಸಾಸ್ಟೆಹಳ್ಳಿ ಮಸೀದಿ ಕಮಿಟಿಯವರು ವಕ್ಫ್ ಹಣ ದುರುಪಯೋಗ ಮಾಡಿದ್ದಾರೆ. ಮಲೇಬೆನ್ನೂರು ಜಾಮೀಯಾ ಮಸೀದಿಯಲ್ಲಿ ಮಾಜಿಕಮಿಟಿಯವರು ಮಸೀದಿಯಲ್ಲಿ 1,97,28,593 ರೂ. ಮತ್ತು ಹೊನ್ನಾಳಿ ಪಠಾಣ್ ವಾಡಿ ಮಸೀದಿಯಲ್ಲಿ ಮಾಜಿಕಮಿಟಿಯವರು 16,57,217 ರೂ. ಹಾಗೂ ಸಾಸ್ವೇಹಳ್ಳಿಯ ಜಾಮೀಯಾ ಮಸೀದಿಯಲ್ಲಿ ಹಣ ದುರ್ಬಳಕೆಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದರು.
ಶಾಸಕರ ಅನುದಾನದಲ್ಲಿ ಮಲೇಬೆನ್ನೂರು ಜುಮ್ಮಾ ಮಸೀದಿಗೆ ಅಭಿವೃದ್ಧಿಗಾಗಿ 5,00,000 ರೂ. ಸರ್ಕಾರದಿಂದ ಲ್ಯಾಂಡ್ ಅರ್ಮಿಗೆ ಬಿಡುಗಡೆಯಾಗಿದ್ದು, ಆಡಳಿತ ಅಧಿಕಾರಿ ಜುಮ್ಮಾ ಮಸೀದಿ ಮತ್ತು ಲ್ಯಾಂಡ್ ಆರ್ಮಿಯ ಇಂಜಿನಿಯರ್‌ಗಳು ಸೇರಿ ತಪ್ಪು ದಾಖಲೆಗಳನ್ನು ಸೃಷ್ಟಿಸಿ, ಕಾಮಗಾರಿಯನ್ನು ನಡೆಸದೇ ಬೋಗಸ್ ಬಿಲ್ಲನ್ನು ಸೃಷ್ಟಿಸಿ ಸರ್ಕಾರಿ ಹಣವನ್ನು ಲಪಟಯಿಸುವ ಸಂಚು ಮಾಡಿದ್ದಾರೆ.
ಸಾರ್ವಜನಿಕರ ದೂರಿನ ಅನ್ವಯ, ಶಾಸಕರ ನಿರ್ದೇಶನ ಮೇರೆಗೆ ಸದರಿ ಬಿಲ್ಲನ್ನು ತಡೆಹಿಡಿಯಲಾಗಿದೆ. ಅಡಳಿತ ಅಧಿಕಾರಿ ಸೈದ್ ನಿಸಾರ್‌ರವರು ಮತ್ತು ಲ್ಯಾಂಡ್ ಆರ್ಮಿ ಇಂಜಿನಿಯರ್ ಸೇರಿ ಶಾಮಿಲಾಗಿ ದಾಖಲೆಗಳನ್ನು ಇಲಾಖೆಗೆ ನೀಡಿದ್ದು ಇವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜುಮ್ಮಾ ಮಸೀದಿ ಕಟ್ಟಡ ಕಾಮಗಾರಿಗಾಗಿ ಸಾರ್ವಜನಿಕರಿಂದ ಅಂದಾಜು 40ಲಕ್ಷಗಳಷ್ಟು ಚಂದ ಹಣವನ್ನು ಸಂಗ್ರಹಿಸಿ, ಸಂಗ್ರಹಿಸಿದ್ದ ಹಣಕ್ಕೆ ರಸೀದಿಗಳನ್ನು ನೀಡಿದೆ. ಲೆಕ್ಕವನ್ನು ಕೂಡದೆ ಸಮಾಜಕ್ಕೆ ವಂಚನೆ ಮಾಡಿದ್ದಾರೆ. ಹೀಗೆ ಅನೇಕ ಭ್ರಷ್ಟಾಚಾರ ನಡೆದಿದೆ ಆದ್ದರಿಂದ ವಕ್ಫ್ ಸಂಸ್ಥೆ ಉಳಿವಿಗಾಗಿ ಭ್ರಷ್ಟಾಚಾರ ನಡೆಸಿದವರ ಮೇಲೆ ಕಾನೂನುಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ. ಶೌಕತ್ ಅಲಿ, ಲಿಯಾಖತ್ ಅಲಿ ಖಾನ್, ಅಬುಸಲೇಹ, ಮಹಮ್ಮದ್ ಫಾಸಿಲ್ ಗಫಾರ್ ಖಾನ್, ನಿಸಾರ್ ಅಹಮದ್, ಅಕ್ಟರ್ ಉಪಸ್ಥಿತರಿದ್ದರು.