ಜವಳಗೇರಾ ನಾಡಗೌಡರ ಕುಟುಂಬದ ಹೆಚ್ಚುವರಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂಹೀನ ಬಡ ಕುಟುಂಬಗಳಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ನೇತೃತ್ವದಲ್ಲಿ ರಾಯಚೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಶನಿವಾರಕ್ಕೆ 100 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ 100 ಪಂಜುಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಸಿದರು.
ನಗರದ ಯಮನೂರಪ್ಪ ದರ್ಗಾದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಹಿರೇಹಳ್ಳ ಸೇತುವೆ, ಕಿತ್ತೂರುರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ತಲುಪಿತು. ಪಂಜುಗಳನ್ನು ಹಿಡಿದುಕೊಂಡೇ ಸರ್ಕಾರ ಹಾಗೂ ನಾಡಗೌಡರ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ಸಮಿತಿ ಸದಸ್ಯ ಎಂ ಗಂಗಾಧರ್ ಮಾತನಾಡಿ, “100 ದಿನಗಳ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅಧಿಕಾರಿಗಳು ಜಮೀನ್ದಾರರ ಪಕ್ಕಾ ಖಾಸಗಿ ಏಜೆಂಟಾಗಿ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು ಮೌನ ವಹಿಸಿ, ನಾಡಗೌಡರ ಬೆಂಬಲಕ್ಕೆ ನಿಂತಿದ್ದರಿಂದ ಭೂಹೀನರ ಹೋರಾಟಕ್ಕೆ ಅಧಿಕಾರಿಗಳೇ ಕಂಟಕರಾಗಿದ್ದಾರೆ” ಎಂದು ದೂರಿದರು.
“ಜವಳಗೇರ ಭೂ ಪ್ರಕರಣ ಸೇರಿದಂತೆ ಜಿಲ್ಲೆಯ ಎಲ್ಲ ಹೆಚ್ಚವರಿ ಭೂ ಪ್ರಕರಣಗಳ ಮರು ವಿಚಾರಣೆಗೆ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಸೆಕ್ಷನ್- 122(ಎ)ಗೆ ತಿದ್ದುಪಡಿ ತರಬೇಕು. ಜವಳಗೇರ ಭೂ ಪ್ರಕರಣವನ್ನು ಶೀಘ್ರಗತಿಯಲ್ಲಿ ವಿಚಾರಣೆ ಮಾಡಿ ಮುಗಿಸಬೇಕು. ಸಿಂಧನೂರು ಸರ್ವೆ ನಂ.419 ಹಾಗೂ ಸುಲಾನಪೂರ ಸುಲ್ತಾನಪೂರ ಸರ್ವೆ ನಂ.186 ಸೇರಿದಂತೆ ಕರ್ನಾಟಕ ಸರ್ಕಾರ ಎಂದಿರುವ ಎಲ್ಲ ಹೆಚ್ಚವರಿ ಭೂಮಿಗಳನ್ನು ಈಗಾಗಲೇ ಅರ್ಜಿ ಸಲ್ಲಿಸಿದ ಭೂರಹಿತರಿಗೆ ವಿತರಿಸಬೇಕು” ಎಂದು ಒತ್ತಾಯಿಸಿದರು.
“ಸಿಂಧನೂರು ಮತ್ತು ಪಗಡದಿನ್ನಿ ಸೇರಿದಂತೆ ತಾಲೂಕಿನ ಇತರ ಸರ್ಕಾರಿ ಖಾರಿಜಖಾತಾ, ಕರ್ನಾಟಕ ಸರ್ಕಾರ ಹೆಚ್ಚುವರಿ ಭೂಮಿಗೆ ಅರ್ಜಿ ಸಲ್ಲಿಸಿದ ಎಲ್ಲ ಜಾತೀಯ ಭೂಹೀನ ಬಡವರಿಗೆ ಭೂ ಮಂಜೂರಾತಿ ನೀಡಬೇಕು. ಈ ವಿಷಯದಲ್ಲಿ ಕರ್ತವ್ಯ ಮರೆತು ಪ್ರತಿವಾದಿಗಳಿಗೆ ಸಹಕಾರ ನೀಡುತ್ತಿರುವ ತಹಶೀಲ್ದಾರ್ ಅರುಣ್ ದೇಸಾಯಿ ಅವರನ್ನು ಅಮಾನತುಗೊಳಿಸಬೇಕು. ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡ ಸಚಿವ ಸಂತೋಷ ಲಾಡ್
“ನಾಡಗೌಡರ ಪರವಾಗಿ ವಕಾಲತ್ತು ವಹಿಸಿರುವ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಕಂಡಲ್ಲಿ ಘೇರಾವ್ ಹಾಕಿ ಪ್ರತಿಭಟಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಜೀಜ್ ಜಾಗಿರದಾರ, ಆದಿ ನಗನೂರು, ಅಮೀರ್ ಅಲಿ ಸೇರಿದಂತೆ ಇತರರು ಇದ್ದರು .
ಎಲ್ಲರೂ ಕಳ್ಳ ನನ್ನ ಮಕ್ಕಳು ಥರ್ಡ್ ಕ್ಲಾಸ್ ಪೊಲಿಟಿಕಲ್ ಲೀಡರ್ಸ್ ಆಫ್ ಕರ್ನಾಟಕ