ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕಾಂಗ್ರೆಸ್‌ಗೆ ರಾಜೀನಾಮೆ ನಿಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ ಸೇರ್ಪಡೆಯಾಗಲಿದ್ದಾರೆ. ಶಿವಸೇನೆ ಸೇರುತ್ತಾರೆಂಬ ಊಹಾಪೋಹಗಳು ಹರಿದಾಡುತ್ತಿದ್ದ ಒಂದು ದಿನದ ನಂತರ ದಿಯೋರಾ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಖಚಿತವಾಗಿದೆ.
ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಕುಟುಂಬ ಹೊಂದಿದ್ದ 55 ವರ್ಷದಷ್ಟು ಹಳೆಯ ಸಂಬಂಧ ಕೊನೆಗೊಳ್ಳುತ್ತಿದೆ. ಅಲ್ಲದೆ. ತಾವು ರಾಜೀನಾಮೆ ಕೊಟ್ಟಿರುವ ವಿಷಯವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ.
‘ನಮ್ಮ ರಾಜಕೀಯ ಪ್ರಯಾಣದಲ್ಲಿ ಇವತ್ತಿಗೆ ಒಂದು ಪ್ರಮುಖ ಘಟ್ಟ ಮುಕ್ತಾಯವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಇದರೊಂದಿಗೆ ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷದ ಸಂಬಂಧ ಅಂತ್ಯಗೊಳಿಸುತ್ತಿದ್ದೇನೆ. ಹಲವು ವರ್ಷಗಳಿಂದ ಅಚಲವಾಗಿ ಬೆಂಬಲ ನೀಡುತ್ತಾ ಬಂದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರಿಗೆ ನಾನು ಚಿರಋಣಿಯಾಗಿದ್ದೇನೆ’ ಎಂದು ದಿಯೋರಾ ಪ್ರಕಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?
ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ಉದ್ಧವ್ ಠಾಕ್ರೆ ಬಣ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತಾವು ಹಕ್ಕು ಸಾಧಿಸುವುದಾಗಿ ಹೇಳಿದ ನಂತರ ಇತ್ತೀಚಿಗಷ್ಟೆ ದಿಯೋರಾ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕರ್ತರೊಂದಿಗೆ ಚರ್ಚಿಸಿ ತಮ್ಮ ತೀರ್ಮಾನ ತಿಳಿಸುವುದಾಗಿ ಹೇಳಿದ್ದರು.
“ನಾನು ನನ್ನ ಬೆಂಬಲಿಗರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಇತ್ತೀಚಿಗೆ ಸುದ್ದಿಗಾರರಿಗೆ ತಿಳಿಸಿದ್ದರು.
ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನರ್ವೇಕರ್ ಅವರು ತಮ್ಮ ನಿರ್ಣಾಯಕ ತೀರ್ಪಿನ್ನು ಘೋಷಿಸುವ ಸಂದರ್ಭದಲ್ಲಿ, ‘ಪಕ್ಷದ ಅಧ್ಯಕ್ಷರು ರಾಜಕೀಯ ಪಕ್ಷದ ನಿರ್ಧಾರವನ್ನು ತಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಶಿವಸೇನಾ ಸಂವಿಧಾನದ ಬಗ್ಗೆ ಮಹತ್ವದ ಅಂಶಗಳನ್ನು ತಿಳಿಸಿದ್ದಾರೆ ಎಂದು ಮಿಲಿಂದ್ ದಿಯೋರಾ ಹೇಳಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು.
ಮಿಲಿಂದ್ ದಿಯೋರಾ ಅವರು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ನ ಅತ್ಯಂತ ಹಿರಿಯ ನಾಯಕರಾಗಿದ್ದ ದಿವಂಗತ ಮುರಳಿ ದಿಯೋರಾ ಅವರ ಪುತ್ರ. ಅವರ ತಂದೆ ನಿಧನರಾದ ನಂತರ ಮಿಲಿಂದ್ ದಿಯೋರಾ 2004 ಮತ್ತು 2009ರಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದರು. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಅರವಿಂದ್ ಸಾವಂತ್ ವಿರುದ್ಧ ಪರಾಭವಗೊಂಡಿದ್ದರು.