ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಮಣಿಪುರವನ್ನು ಈ ದೇಶದ ಭಾಗವೆಂದು ತಿಳಿದಿಲ್ಲ. ನಿಮ್ಮ ನೋವು ಅವರ ನೋವಾಗಿಲ್ಲ. ನಾವು ಮಣಿಪುರದ ಜನರು ಅನುಭವಿಸುತ್ತಿರುವ ನೋವನ್ನು ಅರ್ಥಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮಣಿಪುರದ ತೌಂಬಲ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ನಿಮ್ಮ ದುಃಖ,ದುಮ್ಮಾನ ತಿಳಿದಿದೆ. ನಾವು ಶಾಂತಿ ಸಾಮರಸ್ಯವನ್ನು ಮರಳಿಸುತ್ತೇವೆ. ಇಲ್ಲಿನ ಲಕ್ಷಾಂತರ ಜನರು ತುಂಬ ನಷ್ಟವನ್ನು ಅನುಭವಿಸಿದ್ದಾರೆ. ನಿಮ್ಮ ಕಣ್ಣೀರನ್ನು ಒರೆಸಲು ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ. ನಿಮ್ಮ ಕೈಯನ್ನು ಹಿಡಿದು ಅಪ್ಪಿಕೊಳ್ಳಲಿಲ್ಲ. ಅವರೆಲ್ಲ ಮಣಿಪುರ ಈ ದೇಶದ ಭಾಗವಲ್ಲ ಎಂದು ತಿಳಿದಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿಯವರಿಗೆ ಸಮುದ್ರದ ಆಳದಲ್ಲಿ ಈಜಾಡಲು ಸಮಯವಿದೆ, ಆದರೆ ಮಣಿಪುರಕ್ಕೆ ಬರಲು ಸಮಯವಿಲ್ಲ. ಮೋದಿ ರಾಮ, ರಾಮ ಎಂಬ ಭಜನೆ ಮಾಡುತ್ತಾರೆ. ಆದರೆ ತಮ್ಮ ಭಜನೆಯನ್ನು ಮತ ಕೇಳಲು ಮಾತ್ರ ಬಳಸುತ್ತಾರೆ. ಬಿಜೆಪಿಯು ಧರ್ಮ ಹಾಗೂ ರಾಜಕಾರಣ ಬೆರಸಿ ಜನರನ್ನು ಪ್ರಚೋದಿಸುತ್ತಿದೆ. ಬಿಜೆಪಿಯವರು ಬಾಯಲಿ ರಾಮ ಎಂದು ಹೇಳಿ, ಕೈನಲ್ಲಿ ಚಾಕು ಇಟ್ಟುಕೊಂಡಿರುತ್ತಾರೆ. ರಾಜಕೀಯಕ್ಕಾಗಿ ಇಂತಹ ಕೆಲಸವನ್ನು ಮಾಡಬಾರದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?
“ಕಾಂಗ್ರೆಸ್ ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ಸಮಾನತೆ ಪರವಾಗಿ ನಿಂತಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿವ ಅಭಿಯಾನವಾಗಿದ್ದು, ಪ್ಯಾಸಿಸ್ಟ್ ಪಡೆಗಳ ವಿರುದ್ಧದ ಹೋರಾಟವಾಗಿದೆ. ನಮ್ಮ ಪಕ್ಷದ ನಾಯಕರು ಮನೆಮನೆಗೆ ತೆರಳಿ ಶಾಂತಿ ಸಂದೇಶ ಸಾರುತ್ತಿದ್ದಾರೆ” ಎಂದು ಖರ್ಗೆ ಹೇಳಿದರು.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಣಿಪುರದಿಂದ ಮುಂಬೈವರೆಗೂ ತೆರಳುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಭಿಯಾನದ ಬಸ್‌ಅನ್ನು ಉದ್ಘಾಟಿಸಿದರು.
ಯಾತ್ರೆಯು 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 110 ಜಿಲ್ಲೆಗಳಲ್ಲಿ 6,713 ಕಿಮೀ ದೂರವನ್ನು ಕ್ರಮಿಸಲಿದೆ. ಇದು 66 ದಿನಗಳ ನಂತರ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.