ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯು ನರೇಂದ್ರ ಮೋದಿ ಅವರ ಕಾರ್ಯಕ್ರಮ ಎಂದು ಪ್ರಧಾನಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ನಾಗಾಲ್ಯಾಂಡ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯು ಮೂರನೇ ದಿನ ಸಾಗುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್‌ಎಸ್‌ಎಸ್ ಹಾಗೂ ಬಿಜೆಪಿಯಿಂದ ರಚಿತಗೊಂಡಿರುವ ಜನವರಿ 22ರ ಕಾರ್ಯಕ್ರಮ ಸಂಪೂರ್ಣವಾಗಿ ನರೇಂದ್ರ ಮೋದಿ ಕಾರ್ಯಕ್ರಮವಾಗಿದೆ. ಇದು ಬಿಜೆಪಿ ಆರ್‌ಎಸ್‌ಎಸ್ ಕಾರ್ಯಕ್ರಮವಾಗಿದ್ದು, ಈ ಕಾರಣದಿಂದ ಕಾಂಗ್ರೆಸ್ ಅಧ್ಯಕ್ಷರು ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ.
“ನಾವು ಎಲ್ಲ ಧರ್ಮಗಳು ಹಾಗೂ ಆಚರಣೆಗಳೊಂದಿಗೆ ಮುಕ್ತವಾಗಿದ್ದೇವೆ. ಹಿಂದೂ ಧರ್ಮದಲ್ಲಿ ಮುಖ್ಯ ಸ್ಥಾನದಲ್ಲಿರುವವರು ಕೂಡ ಜನವರಿ 22ರಂದು ನಡೆಯುವ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವೆಂದು ಬಹಿರಂಗವಾಗಿ ಹೇಳಿದ್ದಾರೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
“ಪ್ರಧಾನಿ ನರೇಂದ್ರ ಮೋದಿ ಸುತ್ತ ಹಾಗೂ ಆರ್‌ಎಸ್‌ಎಸ್ ಸುತ್ತ ವಿನ್ಯಾಸಗೊಳಿಸಲಾದ ಕಾರ್ಯಕ್ರಮಕ್ಕೆ ತೆರಳುವುದು ಮನಗೆ ತುಂಬ ಕಷ್ಟ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಬಿಜೆಪಿಯು ಚುನಾವಣಾ ಲಾಭಕ್ಕಾಗಿ ರಾಜಕೀಯ ಕಾರ್ಯಕ್ರಮವಾಗಿಸಿರುವ ಕಾರಣ ಜನವರಿ 22 ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇನ್ನಿತರ ಪ್ರಮುಖ ನಾಯಕರಾದ ಸೋನಿಯಾ ಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ತಿಳಿಸಿದ್ದರು.
ಏತನ್ಮಧ್ಯೆ, ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕವು ಮಕರ ಸಂಕ್ರಾಂತಿಯಂದು ಅಯೋಧ್ಯೆ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಮತ್ತು ಇತರ ಪಕ್ಷದ ನಾಯಕರು ಜನವರಿ 15 ರಂದು ಅಯೋಧ್ಯೆಯ ಸರಯು ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ಕಾಂಗ್ರೆಸ್ ನಾಯಕರ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ”ಅವರೆಲ್ಲ ಬಾವಿ ಕಪ್ಪೆಗಳ ರೀತಿ ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅವರದು ಓಲೈಕೆ ರಾಜಕಾರಣ. ರಾಮ ಕಾಲ್ಪನಿಕ ಪಾತ್ರ ಎಂದು ಹೇಳುತ್ತಿದ್ದವರು ಈಗ ಎಚ್ಚರಗೊಂಡಿದ್ದಾರೆ” ಎಂದು ಹೇಳಿದರು.