ಗಾಯ ಗಾರುಡಿ | ‘ಪ್ರೀತ್ಸೆ ಪ್ರೀತ್ಸೆ’ ಎಂಬ ಚಿತ್ರಗೀತೆಯೂ ‘ಜನಗಣಮನ’ ಎಂಬ ರಾಷ್ಟ್ರಗೀತೆಯೂ

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

ಕಾಲೇಜಿನಲ್ಲಿ ಮಧ್ಯಾಹ್ನ ಊಟ ಕೊಡುತ್ತಿದ್ದುದರಿಂದ ಊಟಕ್ಕೆ ಮತ್ತು ಎಂಜಿಸಿ ಅವರ ಕನ್ನಡ ಕ್ಲಾಸಿಗೆ ಮಾತ್ರ ಕಾಲೇಜಿಗೆ ಹೋಗುವಂತಾಯಿತು. ಆ ಸಮಯದಲ್ಲಿ ನನ್ನನ್ನು ಇಷ್ಟು ನಿಷ್ಠುರವಾಗಿ ರೂಪಿಸಿದ್ದು ನನ್ನ ಸಾಮಾಜಿಕ ಒಡನಾಟ, ಸಂಘಟನೆ, ಪ್ರತಿಭಟನೆಗಳು. ಎಂ.ಎ.ಗೆ ಸೇರುವವರೆಗೂ ನನ್ನಿಡೀ ದೇಹ-ಮನಸ್ಸು ‘ಧಿಕ್ಕಾರ’ಗಳಿಂದಲೇ ತುಂಬಿಹೋಗಿದ್ದವು…

ಕಳೆದ ಸಂಚಿಕೆಯಲ್ಲಿ ನಾನು ಕಾಲೇಜಿಗೆ ಹೋಗದಿದ್ದರೆ ಕೆಲವು ಉಪನ್ಯಾಸಕರಿಗೆ ಖುಷಿಯಾಗುತ್ತಿತ್ತು ಎಂದು ಹೇಳಿದೆ. ಅದರಲ್ಲಿ ಮುಖ್ಯವಾದ ಇಬ್ಬರೂ ಉಪನ್ಯಾಸಕರು ಸಮಾಜಶಾಸ್ತ್ರ ಪಾಠ ಹೇಳುತ್ತಿದ್ದವರು. ಅದರಲ್ಲಿ ಒಬ್ಬರು ಅದಾಗಲೇ ಹಲವು ಸಮಾಜಶಾಸ್ತ್ರದ ಪುಸ್ತಕಗಳನ್ನು ಬರೆದವರು. ಈ ಇಬ್ಬರಲ್ಲಿ ಒಬ್ಬ ಮಹಿಳಾ ಉಪನ್ಯಾಸಕರು ಒಂದು ಕ್ಲಾಸಿನಲ್ಲಿ ‘ಕಪ್ಪು ಸಾಹಿತ್ಯ’ ಕುರಿತು ಪಾಠ ಮಾಡುವಾಗ ಗದ್ದರ್ ಹೆಸರನ್ನು ವಿಚಿತ್ರವಾಗಿ ‘ಗದಾರ್’ ಎಂದು ಉಚ್ಛರಿಸಿ, “ಸಮಾಜವನ್ನು ವಿರೋಧಿಸುವ, ಭಯ ಉಂಟುಮಾಡುವ ಸಾಹಿತ್ಯವನ್ನವರು ಬರೆಯುತ್ತಾರೆ,” ಎಂದರು. ನನಗೆ ಮೊದಲಿಗೆ ಗದ್ದರ್ ಹೆಸರನ್ನವರು ತಪ್ಪಾಗಿ ಉಚ್ಛರಿಸಿದ್ದೇ ಕೋಪ ಬಂದಿತ್ತು. ಎದ್ದುನಿಂತು, ಗದ್ದರ್ ಹೆಸರನ್ನು ಸರಿಯಾಗಿ ಉಚ್ಛರಿಸುವಂತೆಯೂ, ಸಮಾಜದ ಸ್ವಾಸ್ತ್ಯಕ್ಕಾಗಿ ರಚಿಸುವ ಸಾಹಿತ್ಯವನ್ನು ‘ಸಮಾಜ ವಿರೋಧಿ’ ಸಾಹಿತ್ಯ ಎಂದು ಹೇಳಬಾರದು, ಮತ್ತದು ನೀವೇಳುತ್ತಿರುವ ಅರ್ಥದ ‘ಕಪ್ಪು ಸಾಹಿತ್ಯ’ ಅಲ್ಲ ಎಂದೂ ವಾದಿಸಿದೆ. ಅವರಿಗೆ ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು ತೋಚದೆ ಏನೇನೋ ಮಾತನಾಡಿದರು, ಕೂಗಾಡಿದರು. ಇನ್ನೂ ಸಮಯವಿರುವಾಗಲೇ ತರಗತಿ ಮುಗಿಸಿ ಹೊರಟರು. ಅವರ ಆನಂತರದ ತರಗತಿಗಳಲ್ಲಿ ಏನಾದರೊಂದು ಪ್ರಶ್ನೆ ಕೇಳಿ ಅವರಿಗೆ ಮುಜುಗರ ಉಂಟುಮಾಡುತ್ತಿದ್ದೆ. ಪ್ರಶ್ನೆಗಳನ್ನು ಸರಿಯಾಗಿಯೇ ಕೇಳುತ್ತಿದ್ದೆನೇ ಹೊರತು ದುರುದ್ದೇಶ ಇರಲಿಲ್ಲ. ಆನಂತರ ಗೆಳೆಯರು ಆ ಉಪನ್ಯಾಸಕರ ತರಗತಿಗಳಲ್ಲಿ ಪ್ರಶ್ನೆ ಕೇಳಿ ಬೇಗ ಕ್ಲಾಸ್ ಮುಗಿಸಿದರೆ ಟೀ ಕೊಡಿಸುವುದಾಗಿ ನನ್ನನ್ನು ಪುಸಲಾಯಿಸುತ್ತಿದ್ದರು. ಸಾಮಾನ್ಯವಾಗಿ ಸಿದ್ಧತೆ ಮಾಡಿಕೊಳ್ಳದೆ ತರಗತಿಗೆ ಬರುತ್ತಿದ್ದ ಅವರು, ಪಾರಂಪರಿಕ ಸಮಾಜಶಾಸ್ತ್ರದ ತಿಳಿವಳಿಕೆಗಳನ್ನೇ ಆತ್ಯಂತಿಕವೆಂದು ನಂಬಿ ಅದನ್ನೇ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು.

ಒಂದು ಮಧ್ಯವಾರ್ಷಿಕ ಪರೀಕ್ಷೆಯ ಸಮಾಜಶಾಸ್ತ್ರದ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಪತ್ರಿಕೆಯಲ್ಲಿಲ್ಲದ ‘ಭಾರತದ ಪುರುಷಪ್ರದಾನ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ’ ಅನ್ನೋ ವಿಷಯದ ಬಗ್ಗೆ ನಾಲ್ಕೈದು ಪುಟ ಬರೆದು ಅದನ್ನೇ ಕೊಟ್ಟುಬಿಟ್ಟಿದ್ದೆ. ಮೌಲ್ಯಮಾಪನ ಮುಗಿಸಿ ತರಗತಿಯಲ್ಲಿ ಅಂಕಗಳನ್ನು ಹೇಳುವಾಗ ನನ್ನ ಅಂಕಗಳನ್ನು ಹೇಳದೆ ಸ್ಟಾಫ್ ರೂಮಿನಲ್ಲಿ ಅವರನ್ನು ಭೇಟಿ ಮಾಡಲು ಹೇಳಿದರು. ನಾನು ಹೋಗಿ ಅವರ ಮುಂದೆ ನಿಂತಾಗ, ಡ್ರಾಯರಿನಲ್ಲಿದ್ದ ನನ್ನ ಉತ್ತರ ಪತ್ರಿಕೆ ತೆಗೆದು ಮುಂದೆ ಇಟ್ಟು, “ಏನಿದು… ಯಾವ ಪ್ರಶ್ನೆಗೆ ಉತ್ತರ ಇದು? ನೀನು ಬರೆದಿರೋದೇನೋ ಸರಿಯಾಗಿದೆ; ಆದರೆ, ಇಲ್ಲದ ಪ್ರಶ್ನೆಗೆ ಉತ್ತರ ಬರೆಯೋದು ಅಂದ್ರೆ ಏನು? ನಿನ್ನನ್ನು ನೋಡ್ತಿದ್ರೆ ನಕ್ಸಲೈಟ್ ಥರಾ ಕಾಣ್ತಿಯಾ…” ಅಂದರು. ಅದಾದ ನಂತರ ಅವರ ತರಗತಿಗಳಿದ್ದಾಗ, “ಮೇಡಂ ಕ್ಲಾಸಿಗೆ ಬರ್ತೀರಾ?” ಅಂತ ಕೇಳಲು ಹೋದರೆ, “ಹೌದು… ಯಾಕೆ – ನೀನೆಲ್ಲಿಯಾದರೂ ಹೋಗ್ಬೇಕಾ? ಕ್ಲಾಸಿಗೆ ಬರಲ್ವಾ? ಪರವಾಗಿಲ್ಲ ಹೋಗಿಬಾ – ಅಟೆಂಡೆನ್ಸ್ ಕೊಡ್ತಿನಿ,” ಅನ್ನುತ್ತಿದ್ದರು. ಕೊನೆಯ ವರ್ಷ ಪೂರ್ತಿ ಅವರ ತರಗತಿಗಳಿಗೆ ಹೋಗಿದ್ದು ನನಗೆ ನೆನಪಿಲ್ಲ.

Advertisements

ಇನ್ನೊಬ್ಬರು ಸಮಾಜಶಾಸ್ತ್ರದ ಪುಸ್ತಕಗಳನ್ನು ಬರೆದ ಉಪನ್ಯಾಸಕರಿದ್ದರಲ್ಲ ಅವರು ನನ್ನನ್ನು ಕಂಡರೆ ಬುಸುಗುಟ್ಟುತ್ತಿದ್ದರು. ನನ್ನ ಸಂಘಟನೆಯ ಹಿನ್ನೆಲೆ ಅವರಿಗೆ ಅಸಹನೆ ಮೂಡಿಸಿತ್ತು. ದಲಿತ ಸಮುದಾಯದಿಂದ ಬಂದಿದ್ದ ಅವರು, ಉಗ್ರ ದೇಶಪ್ರೇಮಿಯಂತೆ ತೋರಿಸಿಕೊಳ್ಳುತ್ತಿದ್ದರು. ಬೆಳಗ್ಗೆ ಮೊದಲಿನ ಕ್ಲಾಸ್ ಇದ್ದಾಗೆಲ್ಲ ಕೆಳಗೆ ಪಿಯು ಕಾಲೇಜಿನವರು ಪ್ರೇಯರಿನಲ್ಲಿ ‘ಜನಗಣಮನ’ ಶುರು ಮಾಡಿದಾಗ ಮೊದಲ ಮಹಡಿಯಲ್ಲಿ ಕ್ಲಾಸಲ್ಲಿದ್ದ ನಮ್ಮನ್ನೆಲ್ಲ ಎದ್ದು ನಿಲ್ಲಿಸುತ್ತಿದರು. ನಾನೊಂದು ದಿನ ಏಳದೆ ಕೂತಿದ್ದೆ. ಪ್ರೇಯರ್ ಮುಗಿದ ಮೇಲೆ, “ಏನಯ್ಯಾ… ‘ಪ್ರೀತ್ಸೆ ಪ್ರೀತ್ಸೆ’ ಅಂತ ಹಾಡು ಕೇಳಿದ್ರೆ ಮೈಕೂದ್ಲೆಲ್ಲಾ ನಿಂತ್ಕಂಡ್‍ಬುಡ್ತವೆ… ‘ಜನಗಣಮನ’ ರಾಷ್ಟ್ರಗೀತೆ ಕೇಳಿದ್ರೆ ಏನೂ ಅನ್ಸಲ್ವಾ?” ಅಂತ ವಿಚಿತ್ರವಾದ ಬಾಡಿ ಲಾಂಗ್ವೇಜ್ ಮೂಲಕ ಕಿಚಾಯಿಸಿದರು. ನಾನು ಎದ್ದು ನಿಂತು, “ಹೌದು ಸಾರ್… ಪ್ರೀತ್ಸೆ ಪ್ರೀತ್ಸೆ ಅನ್ನೋ ಹಾಡು ನನ್ನ ಭಾಷೇಲಿದೆ, ಸಹಜವಾಗಿ ರೋಮಾಂಚನ ಆಗುತ್ತೆ. ಜನಗಣಮನ ನನ್ನ ಭಾಷೇಲಿಲ್ಲ; ಭಾಷೆ ಅರ್ಥ ಆಗದೆ ರೋಮಾಂಚನ ಆಗುತ್ತೇಂದ್ರೆ ಅದು ನಾಟಕ,” ಅಂದುಬಿಟ್ಟೆ. ಹಾಗೆ ನೋಡಿದರೆ, ನನಗೆ ‘ಪ್ರೀತ್ಸೆ ಪ್ರೀತ್ಸೆ’ ಹಾಡು ಕೇಳಿದ್ರೆ ವಾಕರಿಕೆ ಬರ್ತಿತ್ತು. ಅದಾದಮೇಲೆ ಸಿಕ್ಕಸಿಕ್ಕವರ ಹತ್ತಿರವೆಲ್ಲ ನನ್ನ ಬಗ್ಗೆ, “ಏನ್ರೀ ಇವನು… ‘ಸಂವಾದ’ ಜೊತೆ ಇದಾನೆ ಅಂತ ಬರೀ ಸಂವಾದ ಮಾಡೋಕೇ ಬರ್ತಾನೆ,” ಅಂತ ಪ್ರಾಸದಿಂದ ಬೈತಿದ್ದರು.

ಬಿ.ಎ ಕೊನೆಯ ವರ್ಷ ಸಮಾಜಶಾಸ್ತ್ರದಲ್ಲಿ ಒಂದು ಸ್ಪೆಷಲೈಜೇಷನ್ ಟಾಪಿಕ್ ಓದ್ಬೇಕಿತ್ತು. ಇಡೀ ತರಗತಿ ‘ಇಂಡಸ್ಟ್ರಿಯಲ್ ಸೋಷಿಯಾಲಜಿ’ ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡಿತ್ತು. ಅದೇ ‘ದೇಶಪ್ರೇಮಿ ಉಪನ್ಯಾಸಕರು’ ಪಾಠ ಮಾಡುತ್ತಿದ್ದರು. ಒಂದೆರಡು ಕ್ಲಾಸ್ ಆದಮೇಲೆ ಒಂದು ದಿನ, ಕೈಗಾರಿಕಾ ಕ್ರಾಂತಿ ಆಗುವ ಮೊದಲು ಯೂರೋಪಿನ ಕಾರ್ಖಾನೆಗಳಲ್ಲಿ ಕೆಲಸಗಾರರ ಮೇಲೆ ಪ್ರಯೋಗ ಮಾಡುತ್ತಿದ್ದ ಬಗ್ಗೆ ಪಾಠ ಮಾಡುತ್ತಿದ್ದರು. ನೌಕರರಿಗೆ ಒಂದೊತ್ತು ಊಟ ಕೊಟ್ಟು ಅಥವಾ ಒಂದು ಗಂಟೆ ಬಿಡುವು ಕೊಟ್ಟು ಆ ಬಿಡುವಿನ ಸಮಯದಲ್ಲಿ ಸಂಗೀತ ಕೇಳಿಸಿ ಅಥವಾ ಕೆಲಸದ ಸಮಯ ಜಾಸ್ತಿಯೋ ಕಮ್ಮಿಯೋ ಮಾಡಿ ಆ ಪ್ರಯೋಗ ಉತ್ಪನ್ನಗಳ ಪ್ರಮಾಣದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಮಾಡುವ ಬಗ್ಗೆ ಆ ತರಗತಿಯಲ್ಲಿ ವಿವರಿಸುತ್ತಿದ್ದರು. ನನಗೆ ಇದ್ಯಾಕೋ ವಿಚಿತ್ರ ಅನ್ನಿಸಿ, “ಇದೇನ್ ಸಾರ್… ಮನುಷ್ಯರನ್ನು ಇಲಿಗಳ ರೀತಿ ನಡೆಸಿಕೊಂಡು ಅವರ ಮೇಲೆ ಪ್ರಯೋಗ ಮಾಡೋ ಮೂಲಕ ಮಾಡುವ ಕೈಗಾರಿಕಾ ಕ್ರಾಂತಿ ನಾನ್ಸೆನ್ಸ್ ಅಲ್ವಾ? ಇದನ್ನ ನೀವು ಅಷ್ಟೊಂದು ದೊಡ್ಡ ಕ್ರಾಂತಿ ಅಂತ ಬೇರೆ ಹೊಗಳ್ತಾ ಪಾಠ ಮಾಡ್ತಿದೀರಿ!” ಅಂತ ಕೇಳಿದೆ. ಅದಕ್ಕವರು ವ್ಯಗ್ರಗೊಂಡು, “ಇಂಡಸ್ಟ್ರಿಯಲ್ ಸೋಷಿಯಾಲಜಿ ಅಂದ್ರೆ ಇದೇ… ನಿನಗೆ ಇಷ್ಟ ಇಲ್ಲ ಅಂದ್ರೆ ಕ್ಲಾಸಿಗೆ ಬರ್ಬೇಡ – ಬಂದು ನನಗೆ ಡಿಸ್ಟರ್ಬ್ ಮಾಡ್ಬೇಡ,” ಅಂತ ಸಿಕ್ಕಾಪಟ್ಟೆ ದೊಡ್ಡ ಸೀನ್ ಕ್ರಿಯೇಟ್ ಮಾಡಿಬಿಟ್ಟರು. ನಾನು, “ಇದೇ ಸೋಷಿಯಾಲಜಿ ಅಂದ್ರೆ ನನಗಿದು ಬೇಕಾಗಿಲ್ಲ ಸಾರ್…” ಅಂದು ಕ್ರಾಂತಿಕಾರಿಯ ಹಾಗೆ ಹೊರಗೆ ಬಂದೆ. ಅದಾದ ಮೇಲೆ ಇಂಡಸ್ಟ್ರಿಯಲ್ ಸೋಷಿಯಾಲಜಿ ಬದಲು ಮಾನವಶಾಸ್ತ್ರ ಓದಬಹುದು ಅಂತ ಯಾರೋ ಹೇಳಿದ ಕಾರಣಕ್ಕೆ ನಾನದನ್ನೇ ಓದ್ತೀನಿ ಅಂತ ಡಿಸೈಡ್ ಮಾಡಿದೆ. ಸಮಾಜಶಾಸ್ತ್ರದ ಮೇಡಂ, “ನೀನೊಬ್ಬನೇ ಓದ್ಕೋಬೇಕು, ಅದನ್ನ ಇಲ್ಲಿ ಯಾರೂ ಪಾಠ ಮಾಡಲ್ಲ,” ಅಂದ್ರು. ನಾನು ಸರಿ ಅಂತ ಸೋಷಿಯಾಲಜಿ ಕ್ಲಾಸಿಗೆ ಹೋಗೋದು ತಪ್ಪಿಸಿಕೊಂಡೆ. ಆದರೆ, ಪರೀಕ್ಷೆ ದಿನ ಮತ್ತದೇ ಇಂಡಸ್ಟ್ರಿಯಲ್ ಸೋಷಿಯಾಲಜಿ ಪ್ರಶ್ನಪತ್ರಿಕೆ ಕೈಗಿಟ್ಟರು. ಕೇಳಿದ್ದಕ್ಕೆ, “ನೀನು ಅಧಿಕೃತವಾಗಿ ಮಾನವಶಾಸ್ತ್ರ ಆಯ್ಕೆ ಮಾಡ್ಕಂಡಿಲ್ಲ,” ಅಂದರು. ಅದನ್ನೇ ಬರೆದೆ. ಆಶ್ಚರ್ಯಕರ ರೀತಿಯಲ್ಲಿ ಪಾಸೂ ಆಗಿಬಿಟ್ಟೆ.

ಆ ಇಡೀ ವರ್ಷ ನಾನು ಕಾಲೇಜಿಗೆ ಹೋಗುತ್ತಿದ್ದುದು ನನ್ನಿಷ್ಟದ ಮೇಷ್ಟ್ರು ಎಂ ಜಿ ಚಂದ್ರಶೇಖರಯ್ಯ (ಎಂಜಿಸಿ) ಅವರ ಕನ್ನಡ ತರಗತಿಗಾಗಿ ಮಾತ್ರ. ಕಾಲೇಜಿನಲ್ಲಿ ಮದ್ಯಾಹ್ನ ಊಟ ಕೊಡುತ್ತಿದ್ದುದರಿಂದ ಊಟಕ್ಕೆ ಮತ್ತು ಕನ್ನಡ ಕ್ಲಾಸಿಗೆ ಮಾತ್ರ ಕಾಲೇಜಿಗೆ ಹೋಗುವಂತಾಯಿತು. ಆ ಸಮಯದಲ್ಲಿ ನನ್ನನ್ನು ಇಷ್ಟು ನಿಷ್ಟುರವಾಗಿ ರೂಪಿಸಿದ್ದು ನನ್ನ ಸಾಮಾಜಿಕ ಒಡನಾಟ; ಸಂಘಟನೆ – ಪ್ರತಿಭಟನೆಗಳು. ಎಂ.ಎ.ಗೆ ಸೇರುವವರೆಗೂ ನನ್ನಿಡೀ ದೇಹ-ಮನಸ್ಸುಗಳು ‘ಧಿಕ್ಕಾರ’ಗಳಿಂದಲೇ ತುಂಬಿಹೋಗಿದ್ದವು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹುಲಿಕುಂಟೆ ಮೂರ್ತಿ
ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X