ರೆಡ್ಡಿ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಹತ್ತಿರ ನಿಯೋಗ ತೆಗೆದುಕೊಂಡು ಹೋಗುವೆ ಎಂದು ಸಚಿವ ನಾಗೇಂದ್ರ ಅವರು ಹೇಳಿದರು.
ಬಳ್ಳಾರಿ ನಗರದಲ್ಲಿನ ಬಿಡಿಎಎ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ರೆಡ್ಡಿ ಸಮುದಾಯದ ಅಭಿವೃದ್ಧಿಗೋಸ್ಕರ ಸರ್ಕಾರದ ವತಿಯಿಂದ ರೆಡ್ಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ನಿಯೋಗ ತೆಗೆದುಕೊಂಡು ಹೋಗುವೆ. ನಗರದಲ್ಲಿ ತಾಳೂರು ರಸ್ತೆಯ ಮಹಾಯೋಗಿ ವೇಮನ ಅವರ ಹೆಸರನ್ನು ನಾಮಕರಣ ಮಾಡುವ ಚರ್ಚೆ ನಡೆಸಲಾಗುವುದು” ಎಂದು ಹೇಳಿದರು.
“ನಗರದಲ್ಲಿ ನಿರ್ಮಾಣವಾಗುತ್ತಿರುವ ಚಿಲ್ಲಿ ಮಾರುಕಟ್ಟೆಗೆ ಮಹಾಯೋಗಿ ವೇಮನ ಚಿಲ್ಲಿ ಮಾರುಕಟ್ಟೆ ಎಂದು ನಾಮಕರಣ ಮಾಡಲಾಗುವುದು. ಜತೆಗೆ ರೆಡ್ಡಿ ಕಲ್ಯಾಣ ಮಂಟಪಕ್ಕೆ ₹15ಲಕ್ಷ ದೇಣಿಗೆ ನೀಡಲಾಗುವುದು” ಎಂದು ತಿಳಿಸಿದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, “ನಗರದಲ್ಲಿ ನಿರ್ಮಾಣವಾಗುತ್ತಿರುವ ರೆಡ್ಡಿ ಕಲ್ಯಾಣ ಮಂಟಪಕ್ಕೆ ₹50ಲಕ್ಷ ರೂಪಾಯಿ ದೇಣಿಗೆ ನೀಡಲಾಗುವುದು. ಹೊಸದಾಗಿ ನಿರ್ಮಾಣವಾಗುತ್ತಿರುವ ಚಿಲ್ಲಿ ಮಾರುಕಟ್ಟೆಗೆ ವೇಮನ ಚಿಲ್ಲಿ ಮಾರುಕಟ್ಟೆ ಎಂದು ನಾಮಕರಣ ಮಾಡಬೇಕು ಹಾಗೂ ರೆಡ್ಡಿ ಸಮುದಾಯದ ಅಭಿವೃದ್ಧಿಗೆ ರೆಡ್ಡಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು” ಎಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸು; ಕಾಂಗ್ರೆಸ್ ವಿರುದ್ಧ ಆರೋಪ
ರೆಡ್ಡಿ ಜನ ಸಂಘದ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಮಾತನಾಡಿ, “ನಗರದಲ್ಲಿನ ತಾಳೂರು ರಸ್ತೆಗೆ ಮಹಾಯೋಗಿ ವೇಮನ ಅವರ ಹೆಸರನ್ನು ನಾಮಕರಣ ಮಾಡಬೇಕು. ರೆಡ್ಡಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೇಯರ್ ಶ್ವೇತಾ, ಎಡಿಸಿ ಮೊಹಮ್ಮದ್ ಜುಬೇರ್, ಸಿಇಒ ರಾಹುಲ್ ಶರಣಪ್ಪ ಸಂಕನೂರ್, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಪಾಲಿಕೆ ಸದಸ್ಯರು ಇದ್ದರು.