ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಚಿವರು ಶಿಫಾರಸು ಮಾಡಿರುವ ಪಟ್ಟಿಯ ಕುರಿತು ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿ ಅಸಮಧಾನ ವ್ಯಕ್ತಪಡಿಸಿದೆ. ಮತ್ತೊಮ್ಮೆ ಅಭಿಪ್ರಾಯ ಸಂಗ್ರಹಿಸಿ, ಹೆಸರುಗಳನ್ನು ಸೂಚಿಸುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆಗೆ ಕ್ಷೇತ್ರವಾರು ತಯಾರಿ ನಡೆಸಲು ಮತ್ತು ಗೆಲ್ಲಲು ಎಲ್ಲ ಕ್ಷೇತ್ರಗಳಿಗೂ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ನೇಮಿಸಿದೆ. ಈ ಉಸ್ತುವಾರಿಗಳು ಕ್ಷೇತ್ರವಾರ ಅಭಿಪ್ರಾಯ ಸಂಗ್ರಹಿಸಿ, ಕೆಲವು ಹೆಸರುಗಳನ್ನು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ, ಶುಕ್ರವಾರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಚುನಾವಣಾ ಸಮಿತಿಯ ಸಭೆಯಲ್ಲಿ ಸಚಿವರು ನೀಡಿರುವ ಪಟ್ಟಿಯ ಬಗ್ಗೆ ಅಪಸ್ವರ ಕೇಳಿಬಂದಿದೆ. ಹಲವು ಕ್ಷೇತ್ರಗಳಲ್ಲಿ ಪ್ರಬಲ ಆಕಾಂಕ್ಷಿಗಳನ್ನು ಸಚಿವರು ತಮ್ಮ ಪಟ್ಟಿಯಲ್ಲಿ ಸೇರಿಸಿಲ್ಲವೆಂದು ಅಸಮಧಾನ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ತಾವು ನೀಡಿರುವ ಶಿಫಾರಸುಗಳ ಬಗ್ಗೆ ಜ.20ರಂದು ಸಂಜೆಯೊಳಗೆ ವಿವರಣೆ ನೀಡುವಂತೆ ಸಚಿವರಿಗೆ ಸೂಚಿಸಲಾಗಿದೆ. ಸಚಿವರು ಸರಿಯಾದ ರೀತಿಯಲ್ಲಿ ವಿವರಣೆ ಮತ್ತು ಸಮರ್ಥನೆ ನೀಡದಿದ್ದರೆ, ಪಕ್ಷದ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಮತ್ತೊಂದು ಸುತ್ತಿನ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.