ಲೋಕಸಭಾ ಚುನಾವಣೆಗೆ ಸ್ಥಾನ ಹಂಚಿಕೆ ಸಂಬಂಧ ‘ಇಂಡಿಯಾ’ ಒಕ್ಕೂಟದಲ್ಲಿ ತಿಕ್ಕಾಟ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ಟಿಎಂಸಿ-ಎಡಪಕ್ಷಗಳ ನಡುವೆ ಸೀಟು ಹಂಚಿಕೆಗಾಗಿ ವಾದ-ಪ್ರತಿವಾದಗಳು ನಡೆಯುತ್ತಿವೆ. ಇದರ ನಡುವೆ, ತಮ್ಮ ಪಕ್ಷಕ್ಕೆ ಸರಿಯಾದ ‘ಪ್ರಾಮುಖ್ಯತೆ’ ನೀಡದಿದ್ದರೆ, ರಾಜ್ಯದ 42 ಕ್ಷೇತ್ರಗಳಲ್ಲಿಯೂ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ದವಾಗಿದೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮುರ್ಷಿದಾಬಾದ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಬ್ಯಾನರ್ಜಿ ಮಾತನಾಡಿದ್ದಾರೆ. ತಮ್ಮ ನಿಲುವನ್ನು ಪಕ್ಷದ ಮುಖಂಡರ ಮುಂದೆ ವ್ಯಕ್ತಪಡಿಸಿದ್ದಾರೆ. ಮುರ್ಷಿದಾಬಾದ್ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವಾಗಿದೆ. ಅಲ್ಲದೆ, ಕಾಂಗ್ರೆಸ್‌ನ ಭದ್ರಕೋಟೆಯೂ ಆಗಿದೆ. ಆದರೆ, 2019ರ ಚುನಾವಣೆಯಲ್ಲಿ, ಜಿಲ್ಲೆಯ ಮೂರು ಸ್ಥಾನಗಳ ಪೈಕಿ ಬಹರಂಪುರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಉಳಿದೆರಡು ಕ್ಷೇತ್ರಗಳನ್ನು ಕಳೆದುಕೊಂಡಿತ್ತು.
ಮುರ್ಷಿದಾಬಾದ್ ಜಿಲ್ಲೆಯ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವು ಸಾಧಿಸಬೇಕಿದೆ ಎಂದು ಒತ್ತಿ ಹೇಳಿರುವ ಮಮತಾ, ಚುನಾವಣಾ ಸಮರಕ್ಕೆ ಸಜ್ಜಾಗುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.
“ಇಂಡಿಯಾ ಒಕ್ಕೂಟದಲ್ಲಿ ಟಿಎಂಸಿ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಂಗಾಳದಲ್ಲಿ ನಮ್ಮನ್ನು ಹೊರಗಿಟ್ಟು ಆರ್‌ಎಸ್‌ಪಿ, ಸಿಪಿಐ, ಸಿಪಿಐ(ಎಂ)ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ, ನಾವು ನಮ್ಮದೇ ಹಾದಿಯನ್ನು ರೂಪಿಸಿಕೊಳ್ಳುತ್ತೇವೆ. ರಾಜ್ಯದ ಎಲ್ಲ 42 ಸ್ಥಾನಗಳಲ್ಲಿ ಏಕಾಂಗಿಯಾಗಿ ಹೋರಾಡಲು ಮತ್ತು ಗೆಲ್ಲಲು ಸಿದ್ಧತೆಗಳನ್ನು ಮಾಡಬೇಕು,”ಎಂದು ಹಿರಿಯ ಟಿಎಂಸಿ ನಾಯಕರೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ, ಬಂಗಾಳದಲ್ಲಿ ಕಾಂಗ್ರೆಸ್ 2 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವುದಾಗಿ ಟಿಎಂಸಿ ಹೇಳುತ್ತಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬಂಗಾಳದ ಕಾಂಗ್ರೆಸ್ ಘಟಕವು ಟಿಎಂಸಿ ವಿರುದ್ಧ ಕಿಡಿಕಾರುತ್ತಿದೆ. ಸ್ಥಾನಗಳಿಗಾಗಿ ಟಿಎಂಸಿ ಮುಂದೆ ಕಾಂಗ್ರೆಸ್ ‘ಭಿಕ್ಷೆ’ ಬೇಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಅಧೀರ್ ಚೌಧರಿ ಹೇಳಿದ್ದಾರೆ. ಇದೆಲ್ಲವೂ, ಮುಂದಿನ ಚುನಾವಣೆಯಲ್ಲಿ ಬಂಗಾಳದಲ್ಲಿ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್-ಟಿಎಂಸಿ ನಡುವೆ ಬಿರುಕು ಮೂಡುವ ಸಾಧ್ಯತೆಗಳನ್ನು ಸ್ಪಷ್ಟವಾಗಿ ತೋರಿಸುತ್ತಿವೆ.
ಈ ಸುದ್ದಿ ಓದಿದ್ದೀರಾ?: ಪ್ರಚಾರಕ್ಕಾಗಿ ಕಚ್ಚಾಟ | ಮೋದಿ ಚಿತ್ರ ಹಾಕಿಲ್ಲವೆಂದು ಬಂಗಾಳಕ್ಕೆ ಅನುದಾನ ತಡೆದ ಕೇಂದ್ರ
ಈ ನಡುವೆ, ಕಳೆದ ವಾರ ‘ಇಂಡಿಯಾ’ ಒಕ್ಕೂಟ ನಡೆಸಿದ ವರ್ಚವಲ್ ಸಭೆಯಿಂದ ಟಿಎಂಸಿ ದೂರ ಉಳಿದಿತ್ತು. ಬಂಗಾಳದಲ್ಲಿ ಕಾಂಗ್ರೆಸ್ ತನ್ನ ಮಿತಿಗಳನ್ನು ಗುರುತಿಸಿಕೊಳ್ಳಬೇಕು. ರಾಜ್ಯದಲ್ಲಿ ರಾಜಕೀಯ ಸಂಘರ್ಷವನ್ನು ಮುನ್ನಡೆಸಲು ಆಡಳಿತಾರೂಢ ಟಿಎಂಸಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಒತ್ತಿಹೇಳಿತ್ತು.
2019 ರ ಚುನಾವಣೆಯಲ್ಲಿ, ರಾಜ್ಯದಲ್ಲಿ ಟಿಎಂಸಿ 22 ಸ್ಥಾನಗಳನ್ನು ಪಡೆದುಕೊಂಡಿತು, ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿತು ಹಾಗೂ ಬಿಜೆಪಿ 18 ಸ್ಥಾನಗಳನ್ನು ವಶಪಡಿಸಿಕೊಂಡಿತ್ತು.
ತೃಣಮೂಲ ಕಾಂಗ್ರೆಸ್ ಈ ಹಿಂದೆ 2001ರ ವಿಧಾನಸಭಾ ಚುನಾವಣೆ, 2009ರ ಲೋಕಸಭೆ ಚುನಾವಣೆ ಮತ್ತು 2011ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಯು 34 ವರ್ಷಗಳ ಸಿಪಿಐ(ಎಂಒ) ನೇತೃತ್ವದ ಎಡರಂಗದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು.