ಸಂವಿಧಾನವೇ ನಮಗೆ ಧರ್ಮ ಗ್ರಂಥ. ಈ ಗ್ರಂಥದ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವನ್ನು ಸರ್ಕಾರಗಳು ಮಾಡಬೇಕು. ಇದೇ ಸರ್ಕಾರದ ಆಶಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ನಗರದ ಸಿದ್ಧಗಂಗಾ ಮಠದಲ್ಲಿ ಭಾನುವಾರ ನಡೆದ ಡಾ. ಶಿವಕುಮಾರ ಮಹಾಶಿವಯೋಗಿಗಳ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ, ವರ್ಗರಹಿತವಾದ ವೈಚಾರಿಕತೆಯಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ಈ ನಾಡಿನಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದ್ದಾರೆ. ಬಸವಣ್ಣನವರ ಅನೇಕ ಆದರ್ಶ ತತ್ವಗಳು ಎಂದೆಂದಿಗೂ ಪ್ರಸ್ತುತ. ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆಯನ್ನು ಬಸವಾದಿ ಶರಣರು ತಂದಿದ್ದು, ಇವರ ಹೋರಾಟದ ಆಶಯವನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದಾಗಿದೆ” ಎಂದು ತಿಳಿಸಿದರು.
“ಬಸವಾದಿ ಶರಣರ ಆದರ್ಶವನ್ನು ಕಾಯ, ವಾಚ, ಮನಸ ಮೈಗೂಡಿಸಿಕೊಂಡು ಅದರಂತೆ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಶಿವಕುಮಾರ ಸ್ವಾಮೀಜಿಯವರು ಮಾಡಿದ್ದಾರೆ. ಈ ಮೂಲಕ ನುಡಿದಂತೆ ನಡೆದಿದ್ದಾರೆ” ಎಂದರು.
“ಅಕ್ಷರ ಸಂಸ್ಕೃತಿಯಿಂದ ದೂರವಾದ ಜನರು ಸಮಾಜದಲ್ಲಿ ಶೋಷಣೆ, ದೌರ್ಜನಕ್ಕೆ ಒಳಗಾಗಿದ್ದಾರೆ. ಅಕ್ಷರ ಸಂಸ್ಕಾರ ಪಡೆದವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಸೇರಿದ್ದಾರೆ. ಈ ರೀತಿ ಅಕ್ಷರ ಜ್ಞಾನದ ಅಸಮಾನತೆಯಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಉಂಟಾಗಿರುವುದನ್ನು ಇಂದಿಗೂ ನಾವು ಕಾಣಬಹುದಾಗಿದೆ” ಎಂದರು.
“ಮನುಷ್ಯ ಮನುಷ್ಯನನ್ನು ಗೌರವಿಸಬೇಕು, ಪ್ರೀತಿಸಬೇಕು. ದ್ವೇಷಿಸುವ ವಾತಾವರಣವಿರಬಾರದು. ಕಾಯಕ ಮತ್ತು ದಾಸೋಹ ಎರಡೂ ಸಹ ಜೀವನದ ಮೌಲ್ಯಗಳು. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
“ಶಿಕ್ಷಣ ಎಲ್ಲರಿಗೂ ಸಿಗಬೇಕು. ಜ್ಞಾನವಿಕಾಸದಿಂದ ಮಾತ್ರ ನಾವು ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯ ಎಂಬುದು ಶ್ರೀಗಳ ಅಭಿಮತವಾಗಿತ್ತು. ಅಂತೆಯೇ ಸಹಿಷ್ಣುತೆ, ಸಹಬಾಳ್ವೆಯನ್ನು ಜೊತೆಯಾಗಿಟ್ಟಕೊಂಡು ನಾವೆಲ್ಲರೂ ಬದುಕಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
“ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗುವುದು” ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭಾನುವಳ್ಳಿ-ಚನ್ನಗಿರಿ ಗಲಾಟೆಯಲ್ಲಿ ಏಜೆಂಟರಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿ; ಆರೋಪ
“ನಾವು ಬಸವಾದಿ ಶರಣರ ಆದರ್ಶದ ಮೇಲೆ ನಂಬಿಕೆ ಇಟ್ಟವರು. ಆದುದರಿಂದಲೇ ಸಮಾಜದಲ್ಲಿನ ಜನರಿಗಾಗಿ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬಲಾಗುತ್ತಿದೆ. ಪ್ರಸ್ತುತ ವರ್ಷ ₹38,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಖರ್ಚು ಮಾಡಲಾಗುತ್ತಿದೆ. ಮುಂದಿನ ವರ್ಷ ₹68,000 ಕೋಟಿ ಖರ್ಚು ಮಾಡಲಾಗುವುದು” ಎಂದು ತಿಳಿಸಿದರು.
ಈ ವೇಳೆ ಸಚಿವರುಗಳಾದ ಡಾ ಜಿ ಪರಮೇಶ್ವರ್, ಕೆ ಎನ್ ರಾಜಣ್ಣ, ಎಂ ಬಿ ಪಾಟೀಲ್ ಇದ್ದರು.