ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ತಾಲೂಕು ಕಚೇರಿಯ ಕಂದಾಯ ಶಾಖೆಯ ಮೇಲೆ ಶನಿವಾರ(ಜ.20) ಲೋಕಾಯುಕ್ತ ಎಸ್‌ಪಿ ಬಿ.ಕೆ. ಉಮೇಶ್ ನೇತೃತ್ವದ 15 ಅಧಿಕಾರಿಗಳ ತಂಡ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದೆ.
ಶನಿವಾರ ಮಧ್ಯಾಹ್ನ 12ಗಂಟೆಯಿಂದ ಆರಂಭವಾದ ಪರಿಶೀಲನೆ ತಡರಾತ್ರಿಯವರೆಗೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಡಳಿತ ಕೇಂದ್ರದಲ್ಲಿ ಕಂದಾಯ ಇಲಾಖೆ ಕ್ಯಾಲೇಂಡರ್ ಬಿಡುಗಡೆ ಸಮಾರಂಭವಿದ್ದ ಕಾರಣ ತಾಲೂಕು ಕಚೇರಿಯ ಕಂದಾಯ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ತೆರಳಿದ್ದರು.
ಲೋಕಾಯುಕ್ತ ದಾಳಿಯ ನಂತರ ಅಧಿಕಾರಿಗಳನ್ನು ಕರೆಸಿಕೊಂಡು ಕಡತ ತಪಾಸಣೆ ಮುಂದುವರಿಸಿದ್ದರು. ಡಿವೈಎಸ್‌ಪಿ ಸೂರ್ಯನಾರಾಯಣ್ ರಾವ್, ಇನ್ಸ್ಪೆಕ್ಟರ್‌ಗಳಾದ ಯಶವಂತ್ ಕುಮಾರ್, ಕೆ.ಎಸ್.ಆಂಜಿನಪ್ಪ ಸ್ಥಳದಲ್ಲಿ ಹಾಜರಿದ್ದರು.