ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆ, ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ತಮಿಳುನಾಡು ಡಿಎಕೆ ಸರ್ಕಾರ ಅಡ್ಡಿಪಡಿಸುತ್ತಿದೆ ಎನ್ನುವ ಗಂಭೀರ ಆರೋಪವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಆದರೆ ಅವರ ಆರೋಪವನ್ನು ಅಲ್ಲಗಳೆದಿರುವ ತಮಿಳುನಾಡು ಸರ್ಕಾರ, ರಾಮ ಮಂದಿರ ಕಾರ್ಯಕ್ರಮ ನೇರ ಪ್ರಸಾರ ನಿಷೇಧಿಸಿಲ್ಲ, ಪೂಜೆ ನಡೆಸಿ ಪ್ರಸಾದ ವಿತರಣೆಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಹಿತ ನಾನಾ ಧಾರ್ಮಿಕ ಚಟುವಟಿಕೆಗಳ ನೇರ ವೀಕ್ಷಣೆಗೆ ತಮಿಳುನಾಡು ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಬಲ್ ಕಡಿತಗೊಳಿಸಿ ಕಾರ್ಯಕ್ರಮ ವೀಕ್ಷಿಸದಂತೆ ಮಾಡಲಾಗುತ್ತಿದೆ. ತಮಿಳುನಾಡಿನ 200ಕ್ಕೂ ದೇಗುಲಗಳಲ್ಲಿಯೂ ಭಜನೆ, ಇತರೆ ಧಾರ್ಮಿಕ ಚಟುವಟಿಕೆ ನಡೆಸದಂತೆ ಪೊಲೀಸರನ್ನು ಬಳಸಿ ನಿಗ್ರಹಿಸಲಾಗುತ್ತಿದೆ. ಇದು ನಿಜಕ್ಕೂ ಹಿಂದೂ ವಿರೋಧಿ ಹಾಗೂ ದ್ವೇಷದ ಪ್ರಕ್ರಿಯೆ ಎಂದು ಆರೋಪಿಸಿದ್ದಾರೆ.
ಸಚಿವರ ಸ್ಪಷ್ಟನೆ
ನಿರ್ಮಲಾ ಸೀತಾರಾಮನ್ ಆರೋಪವನ್ನು ಅಲ್ಲಗಳೆದಿರುವ ತಮಿಳುನಾಡಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ ಬಾಬು, ಡಿಎಂಕೆ ಯುವ ಸಮಾವೇಶ ಆಯೋಜನೆಯನ್ನು ಸಹಿಸದೇ ಅದರ ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಲಾಗುತ್ತಿದೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?
ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆ ನಿಷೇಧಿಸಿಲ್ಲ. ಇಂತಹ ಯಾವುದೇ ಆದೇಶಗಳನ್ನು ನಾವು ಜಾರಿ ಮಾಡಿಲ್ಲ. ರಾಮಮಂದಿರಗಳಲ್ಲಿ ಚಟುವಟಿಕೆ ನಡೆಸಲು ಯಾವುದೇ ಅಡ್ಡಿ ಮಾಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಡಿಎಂಕೆ ಯುವ ಸಮಾವೇಶಕ್ಕೆ ಭರದ ಸಿದ್ದತೆ ನಡೆದಿದೆ. ಸಮಾವೇಶ ಯಶಸ್ವಿಯಾಗಲಿದೆ ಎನ್ನುವ ಭಯದಲ್ಲಿ ಇಂತ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಇಲಾಖೆಯು ಯಾವುದೇ ಚಟುವಟಿಕೆ ನಡೆಸದಂತೆ ಅಡ್ಡಿಪಡಿಸಿಲ್ಲ. ಅನುಮತಿಯನ್ನೂ ನಿರಾಕರಿಸಿಲ್ಲ. ರಾಮನ ದೇಗಲುಗಳಲ್ಲಿ ಪೂಜೆ, ಪ್ರಸಾದ ನಡೆಸಲು ಅಡ್ಡಿಯಿಲ್ಲ. ಆದರೆ ದೇಶದ ಉನ್ನತ ಹುದ್ದೆಯಲ್ಲಿರುವ ನಿರ್ಮಲಾ ಸೀತಾರಾಮನ್ ತರದವರು ದುರುದ್ದೇಶಪೂರ್ವಕವಾಗಿ ಇಂತಹ ತಪ್ಪು ಸಂದೇಶವನ್ನು ನೀಡುತ್ತಿರುವುದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.