ಮತ್ತೊಂದು ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಾಳೆಂಬ ಕಾರಣಕ್ಕೆ ಕೋಮುವಾದಿ, ವಿಕೃತ ಮನಸ್ಸಿನ ಯುವಕನೊಬ್ಬ ತನ್ನ ತಂಗಿಯನ್ನೇ ಕೆರೆಗೆ ದೂಡಿ ಹತ್ಯೆಗೈದಿದ್ದಾನೆ. ತಂಗಿಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದುರ್ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಧನುಶ್ರೀ ಮತ್ತು ಆಕೆಯ ತಾಯಿ ಅನಿತಾ ಹತ್ಯೆಗೀಡಾದ ದುರ್ದೈವಿಗಳು. ನಿತೀಶ್ ಹತ್ಯೆಗೈದ ವಿಕೃತ ಆರೋಪಿ ಎಂದು ವರದಿಯಾಗಿದೆ.
ಧನುಶ್ರೀ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಆಕೆ ಮತ್ತೊಂದು ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದರು. ಆತನೊಂದಿಗಿನ ಪ್ರೀತಿಯನ್ನು ಬಿಟ್ಟುಬಿಡುವಂತೆ ಮನೆಯವರು ಒತ್ತಾಯಿಸಿದ್ದರು. ಆದರೂ, ಆಕೆ ಪ್ರೀತಿಯನ್ನು ಮುಂದುವರೆಸಿದ್ದರು. ಇತ್ತೀಚೆಗೆ ನಡೆದ ದೊಡ್ಡಹೆಜ್ಜೂರು ಜಾತ್ರೆಯಲ್ಲಿ ಪ್ರೇಮಿಗಳನ್ನು ನೋಡಿದ್ದ ನಿತೀಶ್ ಕೋಪಗೊಂಡಿದ್ದ. ಇದರಿಂದಾಗಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಧನುಶ್ರೀ ಕೊಲೆಗೆ ಸಂಚು ಹಾಕಿದ್ದ ನಿತೀಶ್, ಮಂಗಳವಾರ ರಾತ್ರಿ, ಆಕೆಯನ್ನು ಮಾತ್ರ ಕರೆದರೆ ಬರುವುದಿಲ್ಲವೆಂದು ತಮ್ಮ ತಾಯಿಯನ್ನೂ ಸಂಬಂಧಿಕರ ಮನೆಗೆ ಹೋಗಲೆಂದು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಆದರೆ, ಮರೂರು ಗ್ರಾಮದ ಕೆರೆಯ ಬಳಿ ಅವರನ್ನು ಇಳಿಸಿದ್ದು, ಧನುಶ್ರೀಯನ್ನು ಕೆರೆಗೆ ತಳ್ಳಿದ್ದಾನೆ. ಆಕೆಯನ್ನು ರಕ್ಷಿಸಲು ಹೋದ ತಾಯಿ ಅನಿತಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ 10 ಗಂಟೆಗೆ ಮನೆಗೆ ಮರಳಿದ ಆರೋಪಿ ನಿತೀಶ್, ತಾನು ಎಸಗಿದ ಕೃತ್ಯದ ಬಗ್ಗೆ ತಂದೆ ಸತೀಶ್‌ಗೆ ತಿಳಿಸಿದ್ದಾನೆ. ಸತೀಶ್ ಅವರು ಮಗನ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
“ಧನುಶ್ರೀ ಪ್ರೀತಿಸುತ್ತಿದ್ದ ಯುವಕನನ್ನು ಬಿಟ್ಟುಬಿಡುವಂತೆ ಮನವೊಲಿಸಲು ಯತ್ನಿಸಿದ್ದೆವು. ಆದರೆ, ಆಕೆ ಪ್ರೀತಿಯನ್ನು ಮುಂದುವರೆಸಿದ್ದಳು. ಹೀಗಾಗಿ, ಕಳೆದ ಏಳು ತಿಂಗಳಿಂದ ಆಕೆಯ ಜೊತೆ ನಿತೀಶ್ ಮಾತು ಬಿಟ್ಟಿದ್ದ” ಎಂದು ಸತೀಶ್ ಅವರು ತಮ್ಮ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಆರೋಪಿ ಮರ್ಯಾದೆಗೇಡು ಹತ್ಯೆ ಎಸಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.