ಯಾವುದೇ ಸುಳಿವು ನೀಡದೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾಗಿದ್ದ ಜಗದೀಶ್ ಶೆಟ್ಟರ್ ಅವರು ದಿಢೀರಾಗಿ ದೆಹಲಿಯಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡ ಬಳಿಕ ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಬೆಳವಣಿಗೆಗಳಾಗುತ್ತಿವೆ. ಬಿಜೆಪಿ ಪಾಳಯ ಹರ್ಷದಲ್ಲಿದ್ದರೆ, ಕಾಂಗ್ರೆಸ್ ಪಾಳಯ ಶಾಕ್‌ಗೊಳಗಾಗಿದೆ.
ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರಿಕೊಂಡ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಆತ್ಮಗೌರವ ಕಳೆದುಕೊಂಡ ಬಳಿಕವೂ ಬಿಜೆಪಿಗೆ ಮರಳಿ ಹೋಗುವ ದುಸ್ಥಿತಿ ಶೆಟ್ಟರ್ ಅವರಿಗೆ ಬರಬಾರದಿತ್ತು. ಸಂಧ್ಯಾಕಾಲದಲ್ಲಿ ಜಗದೀಶ್ ಶೆಟ್ಟರ್ ‘ರಾಜಕೀಯ ಆತ್ಮಹತ್ಯೆ’ ಮಾಡಿಕೊಂಡಿದ್ದಾರೆ” ಎಂದು ಟಾಂಗ್ ನೀಡಿದ್ದಾರೆ.
2
ಜಗದೀಶ್ ಶೆಟ್ಟರ್ BJP ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ.ಶೆಟ್ಟರ್‌ರಂತಹ ಸಾವಿರಾರು ನಾಯಕರನ್ನು ಸೃಷ್ಟಿಸುವ ತಾಕತ್ತು ಕಾಂಗ್ರೆಸ್‌ಗಿದೆ.
ಶೆಟ್ಟರ್ ಹಿರಿಯ ರಾಜಕಾರಣಿ.
ಆದರೆ ರಾಜಕೀಯ ಸಂದ್ಯಾಕಾಲದಲ್ಲಿ ತಮ್ಮನ್ನು ಅವಮಾನಿಸಿದ ಪಕ್ಷಕ್ಕೆ ಮರಳಿ ಸೇರಿಕೊಳ್ಳುವ ಮೂಲಕ ಶೆಟ್ಟರ್ ರಾಜಕೀಯ ಆತ್ಮಹತ್ಯೆ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 25, 2024
“ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಅವಮಾನಿತರಾಗಿ ರಾಜಕೀಯ ಆಶ್ರಯ ಅರಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ನಮ್ಮ ಪಕ್ಷ ಅವರಿಗೆ ವಿಧಾನಸಭಾ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿತ್ತು. ಇದಕ್ಕಿಂತ ಹೆಚ್ಚಿನ ಗೌರವ ಕೊಡಲು ಇನ್ನೇನು ಸಾಧ್ಯ?” ಎಂದು ಸಚಿವರು ಕೇಳಿದ್ದಾರೆ.
“ಈಗ ಅವಮಾನ ಮಾಡಿದ ಪಕ್ಷಕ್ಕೇ ಮರಳಿ ಹೋಗಿದ್ದಾರೆ. ಶೆಟ್ಟರ್ ಆತ್ಮಗೌರವ ಕಳೆದುಕೊಂಡು ಬಿಜೆಪಿಗೆ ಮರಳಿ ಹೋಗುವ ದುಸ್ಥಿತಿ ಬರಬಾರದಿತ್ತು” ಎಂದು ಗುಂಡೂರಾವ್ ಟ್ವೀಟಿಸಿದ್ದಾರೆ.
ಇದನ್ನು ಓದಿದ್ದೀರಾ? ಮರ್ಯಾದಾಗೇಡು ಹತ್ಯೆ | ತಂಗಿಯನ್ನೇ ಕೆರೆಗೆ ತಳ್ಳಿ ಹತ್ಯೆಗೈದ ಕೋಮುವಾದಿ ಸಹೋದರ
“ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ. ಶೆಟ್ಟರ್‌ರಂತಹ ಸಾವಿರಾರು ನಾಯಕರನ್ನು ಸೃಷ್ಟಿಸುವ ತಾಕತ್ತು ಕಾಂಗ್ರೆಸ್‌ಗಿದೆ. ಶೆಟ್ಟರ್ ಹಿರಿಯ ರಾಜಕಾರಣಿ. ಆದರೆ ರಾಜಕೀಯ ಸಂಧ್ಯಾಕಾಲದಲ್ಲಿ ತಮ್ಮನ್ನು ಅವಮಾನಿಸಿದ ಪಕ್ಷಕ್ಕೆ ಮರಳಿ ಸೇರಿಕೊಳ್ಳುವ ಮೂಲಕ ಶೆಟ್ಟರ್ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ” ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.