ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆಕ್ರೋಶ ವ್ಯಕ್ತಪಡಿಸಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ, ‘ಕಸ ತನ್ನ ಬುಟ್ಟಿ ಸೇರಿದೆ’ ಎಂದು ಹೇಳಿದ್ದಾರೆ.
ಕಸದ ವಾಹನ ಸಮೇತ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಕಸ ತನ್ನ ಬುಟ್ಟಿ ಸೇರಿದೆ. ಕಸದ ಗುಂಪಿಗೆ ಗಬ್ಬು ನಾರುತ್ತಿರುವ ಕಸ ಬಂದಾಗ ಅದಕ್ಕೆ ಖುಷಿಯಾಗಿದೆ” ಎಂದು ತಿಳಿಸಿದ್ದಾರೆ.
ಗುರುವಾರ(ಜ.25) ನಿತೀಶ್ ಕುಮಾರ್ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ನಂತರ ಅಳಿಸಿದ್ದರು. ನಂತರ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಆರ್‌ಜೆಡಿ ಇದು ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧವಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿತ್ತು ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
“ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಉದ್ದೇಶಗಳಿಗೆ ಇವುಗಳನ್ನು ಬಳಸಿಕೊಂಡಾಗ ಬೇರೆ ರೀತಿಯಲ್ಲಿ ಮಾಡಿದ ಹೇಳಿಕೆಗಳನ್ನು ಹಿಂಪಡೆಯಲಾಗುತ್ತದೆ” ಎಂದು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ಗಳನ್ನು ಅಳಿಸಿದ ನಂತರ ಹೇಳಿಕೆ ನೀಡಿದ್ದರು. ಈ ಪ್ರತಿಕ್ರಿಯೆ ನೀಡುವಾಗ ರೋಹಿಣಿ ಅವರು ಯಾವುದೇ ವ್ಯಕ್ತಿಯ ಹೆಸರನ್ನು ಬಳಸಿರಲಿಲ್ಲ. ಸದ್ಯ ರೋಹಿಣಿ ಅವರು ಸಿಂಗಾಪುರದಲ್ಲಿ ನೆಲಸಿದ್ದಾರೆ.
ಸೈದ್ದಾಂತಿಕವಾಗಿ ಅಲೆದಾಡುವವರು ಸಮಾಜವಾದದ ನಾಯಕರೆಂದು ಗುರುತಿಸಿಕೊಳ್ಳುತ್ತಾರೆ ಎಂದು ಹಿಂದಿಯಲ್ಲಿ ಮಾಡಿ ಅಳಿಸಲಾಗಿದ್ದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಈ ಮಾತುಗಳು ಪರೋಕ್ಷವಾಗಿ ನಿತೀಶ್ ಕುಮಾರ್ ವಿರುದ್ಧ ಮಾಡಿದ ಆರೋಪವಾಗಿತ್ತು. ಒಂದು ದಿನದ ಹಿಂದಷ್ಟೆ ನಿತೀಶ್ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತ ಪರೋಕ್ಷವಾಗಿ ಆರ್‌ಜೆಡಿಯನ್ನು ಟೀಕಿಸಿದ್ದರು.