ಕಳಸಾ ನಾಲಾದಿಂದ 1.72 ಟಿಎಂಸಿ ನೀರನ್ನು ಹಾಗೂ ಬಂಡೂರಾ ನಾಲಾದಿಂದ 2.18 ಟಿಎಂಸಿ ನೀರನ್ನು ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಕೇಂದ್ರ ಅರಣ್ಯ, ಪರಿಸರ ಇಲಾಖೆಯ ಪರವಾನಿಗೆ ಪಡೆಯಲು ಶೀಘ್ರವಾಗಿ 28 ಸಂಸದರ ಸಭೆ ಕರೆದು ಕೇಂದ್ರ ಸರ್ಕಾರದಿಂದ ಜರೂರಾಗಿ ಪರವಾನಗಿ ಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವ ಕುರಿತು ಕರ್ನಾಟಕ ರೈತಸೇನಾ ಮತ್ತು ರೈತಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲೆ ಹುಬ್ಬಳ್ಳಿ ನಗರದ ಮಠದಿಂದ ತಹಶೀಲ್ದಾರ್ ಕಚೇರಿವರೆಗೆ ಜಾಥಾ ಹೊರಟು, ಪ್ರತಿಭಟನೆ ನಡೆಸಿದರು.
ಕರ್ನಾಟಕ ರೈತ ಸೇನಾ ನರಗುಂದ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್ ಬಿ ಜೋಗಣ್ಣವರ ಮಾತನಾಡಿ, “ಕಳೆದ ಒಂಭತ್ತು ವರ್ಷಗಳಿಂದ ಕಳಸಾ ಬಂಡೂರಿ ಹೋರಾಟ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಆದೇಶವಾಗಿದೆ. ವನ್ಯ ಜೀವಿ ಮತ್ತು ಅರಣ್ಯ ಇಲಾಖೆಯ ಪರವಾನಗಿ ಸಿಕ್ಕರೆ ಸಾಕು ಈ ಯೋಜನೆ ಯಶಸ್ವಿಯಾಗುತ್ತದೆ. ನಮ್ಮ ಭಾಗಕ್ಕೆ ನೀರು ಬರಬಾರದು, ಈ ಯೋಜನೆ ಜಾರಿಯಾಗಬಾರದರು ಎಂಬುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೇ ನೇರಹೊಣೆ ಮತ್ತು ಮೂಲ ಕಾರಣರಾಗುತ್ತಾರೆ” ಎಂದು ಆರೋಪಿಸಿದರು.
“ರೈತರ ನಿರಂತರ ಹೋರಾಟಗಳಿಗೆ ಯಾವ ಪಕ್ಷಗಳೂ ಸಹಕಾರವನ್ನು ನೀಡಿಲ್ಲ. ನರಗುಂದದಲ್ಲಿ ಮಹದಾಯಿ ಹೋರಾಟಗಾರ ವೀರೆಶ ಸೊಬರದಮಠ ಸ್ವಾಮಿಗಳ ಮೇಲೆ ಬಿಜೆಪಿಯವರು ದೈಹಿಕ ಹಲ್ಲೆ ಮಾಡಿದರು. ಏನೇ ಆದರೂ ಕೂಡ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ಪ್ರಧಾನಿ ಮೋದಿಯವರಿಗೆ ಹೇಳಿ ಪ್ರಲ್ಹಾದ್ ಜೋಶಿಯವರು ಇದಕ್ಕೆ ಅನುಮತಿ ಕೊಡಿಸಬಹುದಲ್ಲವೆ? ಪ್ರಧಾನಿಗಳೂ ರೈತಪರ ಎಂದು ಮಾತನಾಡುತ್ತಾರೆ. ಆದರೆ, ರೈತಪರ ಖಾಳಜಿ ಮಾತ್ರ ಅವರಲ್ಲಿ ಕಾಣುವುದಿಲ್ಲ. ಒಟ್ಟಾರೆಯಾಗಿ ಮಹದಾಯಿ ಯೋಜನೆಗೆ ಅನುಮತಿ ನೀಡದಿದ್ದರೆ ರೈತರು ಪ್ರಾಣತ್ಯಾಗ ಮಾಡಲೂ ಸಿದ್ಧರಾಗಿದ್ದೇವೆ” ಎಂದರು.
ಕರ್ನಾಟಕ ರೈತ ಸೇನಾ ರಾಜ್ಯಾದ್ಯಕ್ಷ ವಿರೇಶ ಸೊಬರದಮಠ ಸ್ವಾಮಿಜಿ ಮಾತನಾಡಿ, “ಕರ್ನಾಟಕ ರೈತ ಸೇನಾ ನರಗುಂದ ವೇದಿಕೆ ಮೂಲಕ ಈಗಾಗಲೇ ನಮ್ಮ ಹೋರಾಟ 2015ರ ಜುಲೈ 16ರಂದು ಪ್ರಾರಂಭವಾಗಿ ನಿರಂತರವಾಗಿ ನಡೆಯುತ್ತಿದೆ. ಈ ಹೋರಾಟ 8 ನೇ ವರ್ಷ ಕಳೆದು 9 ನೇ ವರ್ಷಕ್ಕೆ ಮುನ್ನೆಡದಿದೆ. ಕಳಸಾ ಬಂಡೂರಿ ಯೋಜನೆಗೆ ಸಂಬಂಧಪಟ್ಟ ಕುಡಿಯುವ ನೀರಿನ ಯೋಜನೆ ಈ ಭಾಗಕ್ಕೆ ಅತಿ ಅವಶ್ಯವಿದ್ದು, ಈಗಾಗಲೇ ಬರಗಾಲದಿಂದ ರೈತರಿಗೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆ ತುಂಬಾ ಇದೆ. ಮುಂಬರುವ ದಿನಗಳಲ್ಲಿ ತೊಂದರೆಗಳಾಗುವುದು ಸತ್ಯ. ಕಾರಣ ಬಂಡೂರಾ ನಾಲಾದಿಂದ ನ್ಯಾಯಾಲಯದ ಆದೇಶದಂತೆ 2.18 ಟಿಎಂಸಿ ಹಾಗೂ ಕಳಸಾ ನಾಲಾದಿಂದ 1.72 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಗಳ ಪರವಾನಗಿ ಪಡೆಯಲು ಒಂದು ವಾರದೊಳಗಾಗಿ ಇನ್ನುಳಿದ 27 ಸಂಸದರೆ ಸಭೆ ಕರೆದು ಕೇಂದ್ರ ಸರ್ಕಾರಕ್ಕೆ ಸಂಬಂದಿಸಿದ ಇಲಾಖೆಗಳಿಂದ ಜರೂರಾಗಿ ಈ ಯೋಜನೆ ಜಾರಿಯಾಗಲು ಕ್ರಮ ಕೈಗೊಳ್ಳಬೇಕು. ಜರೂರಾಗಿ ಪರವಾನಗಿ ದೊರೆತಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ನೀರಿನ ದಾಹವನ್ನು ತೀರಿಸಿದಂತಾಗುತ್ತದೆ” ಎಂದು ತಿಳಿಸಿದರು.
“ಈ ವಿಷಯಕ್ಕೆ ಸಂಬಂಧಪಟ್ಟಂತೆ ಬೇಗನೆ ಪರವಾನಗಿ ಪಡೆದುಕೊಂಡು ಈ ಯೋಜನೆ ಜಾರಿಯಾಗಬೇಕೆಂದು ಒತ್ತಾಯಿಸಿ 2024 ಜನವರಿ 16ರಂದು ನರಗುಂದ ತಹಶೀಲ್ದಾರ್ ಮುಖಾಂತರ ಹಾಗೂ ಜನವರಿ 25ರಂದು ನವಲಗುಂದ ತಹಶೀಲ್ದಾರ್ ಮುಖಾಂತರ ಮನವಿಯನ್ನು ಕಳುಹಿಸಲಾಗಿದೆ. ಉತ್ತರ ದೊರೆಯದಿದ್ದರೆ ಫೆಬ್ರವರಿ ತಿಂಗಳ ಮೊದಲನೇ ವಾರದ ನಂತರ ನಮ್ಮ ಸಂಘಟನೆಯ ಮೂಲಕ ಕರ್ನಾಟಕ ನೀರಾವರಿ ಇಲಾಖೆಯ ಧಾರವಾಡದ ಮುಖ್ಯ ಎಂಜಿನಿಯರ್ ಕಚೇರಿ ಎದುರು ತೀವ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಪರವಾನಿಗೆ ಪಡೆಯಲು ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ಅವರು ಜರೂರಾಗಿ ನಿರ್ದೇಶನ ನೀಡಬೇಕು. ಈ ವಿಷಯದಲ್ಲಿ ನಮ್ಮ ಪ್ರಾಣ ತ್ಯಾಗ ಮಾಡಲೂ ಸಿದ್ದರಿದ್ದೇವೆ. ರೈತರ ಪ್ರಾಣ ಹೋಗುವುದೇ ನಿಮಗೆ ಮುಖ್ಯವಾದರೆ ನಿಮ್ಮ ಮೊಂಡುತನವನ್ನು ಬಿಡದಿರಿ, ರೈತಪರ ಕಿಂಚಿತ್ತಾದರೂ ಖಾಳಜಿ ನಿಮಗಿದ್ದರೆ ಕೂಡಲೇ ಕಾಮಗಾರಿ ಶುರು ಮಾಡಬೇಕು” ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, “ಉತ್ತರ ಕರ್ನಾಟಕದ ಪೈಕಿ ಹುಬ್ಬಳ್ಳಿ-ಧಾರವಾಡ ಜಲಜೀವನ ಯೋಜನೆ ಜಾರಿಗೆ ತರುತ್ತೇವೆಂದು ಡಬಲ್ ಎಂಜಿನ್ ಸರ್ಕಾರ ಹಮ್ಮಿನಿಂದ ಹೇಳಿದೆ. ಹುಬ್ಬಳ್ಳಿ ಧಾರವಾಡ, ನವಲಗುಂದ, ನರಗುಂದ, ಕುಂದಗೋಳ ಭಾಗಕ್ಕೆ ನೀರಿನ ಅವಶ್ಯಕತೆಯಿದೆ. ಅಧಿಕಾರಕ್ಕೆ ಬರುವ ಮೊದಲು ರಕ್ತದಲ್ಲೂ ಬರೆದು ಕೊಟ್ಟು ಅಧಿಕಾರಕ್ಕೆ ಬಂದನಂತರ ರೈತನ ಸಮಸ್ಯೆ, ಕಳಸಾ-ಬಂಡೂರಿ ಸಮಸ್ಯೆಯನ್ನು ಬಗೆಹರಿಸದೆ ಅಧಿಕಾರದ ಚುಕ್ಕಾಣಿ ಹಿಡಿಯಲು ಆಡುವ ಮಾತುಗಳನ್ನು ಬಿಟ್ಟು ರೈತಪರ ಖಾಳಜಿ ವಹಸಿರಿ” ಎಂದು ಗುಡುಗಿದರು.
ಉತ್ತರ ಕರ್ನಾಟಕ ಮಹಾದಾಯಿ ಹೋರಾಟಗಾರ ಹೇಮಣ್ಣ ಬಸನಗೌಡ್ರ ಮಾತನಾಡಿ, “ಕಳಸಾ ಬಂಡೂರಿ ಯೋಜನೆಗಾಗಿ ಹೊರಾಟದಲ್ಲಿ ಹಲವು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಮಹದಾಯಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಚ ರಾಜಕೀಯ ಮಾತ್ರ ಮಾಡುತ್ತಿವೆ. ನಮ್ಮಲ್ಲೆ ಹುಟ್ಟಿದ ನೀರು ನಮಗೇ ದೊರೆಯದೆ 212 ಟಿಎಂಸಿ ನೀರು ಅರಬ್ಬೀ ಸಮುದ್ರವನ್ನು ಸೇರುತ್ತಿದೆ. ಈ ಯೋಜನೆ ಜಾರಿಯಾದರೆ ನಮ್ಮ ರಾಜ್ಯದ ನಾಲ್ಕು ಜಿಲ್ಲೆಗಳ ಪಟ್ಟಣ ಮತ್ತು ಹಳ್ಳಿಗಳಿಗೆ ನೀರು ಸರಬರಾಜು ಆಗಿ, ರೈತರಿಗೆ ನೀರಾವರಿ ಸೌಲಭ್ಯ ದೊರಕಿದಂತಾಗುತ್ತದೆ. ಕೂಡಲೇ ಕಳಸಾ ಬಂಡೂರಿ ಕಾಮಗಾರಿ ಪ್ರಾರಂಬಿಸದಿದ್ದರೆ, ಮುಂಬುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಚ್ ಕೆ ಪಾಟೀಲ್ ಚಾಲನೆ
ಗದಗ ಜಿಲ್ಲೆ ರೋಣ ತಾಲೂಕು ಯಾವಗಲ್ ಗ್ರಾಮದ ಹೇಮಾ ಗಾಳಿ ಮಾತನಾಡಿ, “ಸುಮಾರು ಎಂಟು ವರ್ಷದಿಂದ ನಾನು ಈ ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಎಲ್ಲ ರಾಜಕಾರಣಿಗಳೂ ಸುಮ್ಮನೆ ಆಶ್ವಾಸನೆ ನೀಡುತ್ತಾರೆಯೇ ಹೊರತು, ರೈತರಿಗೆ ಯಾರೂ ಅನುಕೂಲವಾಗಿಲ್ಲ. ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಮುಳುವಾಗಿದೆ” ಎಂದು ಆರೋಪಿಸಿದರು.
ಹನ್ನೆರಡು ಪ್ರಗತಿಪರ ಸಂಘಟನೆಗಳು, ರೈತಪರ ಹೋರಾಟಗಾರರು, ಆಟೋ ಚಾಲಕರು, ಮಹಿಳೆಯರು ಇದ್ದರು.