ವಿಜಯಪುರದ ಪ್ರಗತಿಪರ ಸಂಘಟನೆಗಳ ವೇದಿಕೆ ನಗರದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತದವರೆಗೂ ಕ್ಯಾಂಡಲ್ ಮಾರ್ಚ್ ಮಾಡಿ, ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಾಂಧೀಜಿಯವರ ಹುತಾತ್ಮ ದಿನ ಆಚರಿಸಿದರು.
ಒಂದು ನಿಮಿಷ ಮೌನಚರಣೆ ನಂತರ, ಪ್ರಗತಿಪರ ಸಂಘಟನೆಯ ಮುಖಂಡ ಅಕ್ರಮ ಮಾಶಾಳಕಾರ ಮಾತನಾಡಿ, ಜನವರಿ 30, ಮಹಾತ್ಮ ಗಾಂಧಿಯ ಹತ್ಯೆಯ ದಿನ, ಈ ಹತ್ಯೆಯನ್ನು ಮಾಡಿದವನು ನಾತುರಾಮ್ ಗೋಡ್ಸೆ ಎಂಬ ಹಂತಕ, ಹತ್ಯೆ ಮಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಂಡಿದ್ದನು. ಇಂಥ ಸಂಸ್ಕೃತಿ ನಮ್ಮ ದೇಶದಲ್ಲ. ಬಹುತ್ವವನ್ನು ಪ್ರತಿಪಾದಿಸುವಂತಹ ದೇಶ. ಹಿಂಸೆ ಯನ್ನು ವೈಭವಿಕರಿಸುವಂತದ್ದು ನಮ್ಮ ಸಂಸ್ಕೃತಿಯಲ್ಲ ಎಂದರು.
ಗಾಂಧೀಜಿಯವರ ವಿಚಾರಗಳು ವಿಶ್ವಮಟ್ಟದಲ್ಲೇ ಪ್ರಚಾರ ಗೊಂಡಿರುವುದು ತಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ನನ್ನ ಜೀವನವೇ ನನ್ನ ಸಂದೇಶ ಎಂಬ ವಾಕ್ಯ ಗಾಂಧೀಜಿಯವರ ವಿಚಾರವಾಗಿತ್ತು. ದೇಶಕ್ಕೋಸ್ಕರ ತಮ್ಮ ಜೀವದಾನ ಮಾಡಿದಂತ ಮಹಾ ಪುಣ್ಯಾತ್ಮ ಗಾಂಧೀಜಿ. ಆದರೆ, ಇಂದಿನ ದಿನಮಾನಗಳಲ್ಲಿ ಮತ್ತೆ ಗೋಡ್ಸೆಅಂತಹ ವಿಚಾರಗಳು ಮುನ್ನೆಲೆಗೆ ಬರುತ್ತಿರುವುದು ದೇಶಕ್ಕೆ ಅಪಾಯಕಾರಿ ಎಂದರು.
ಪ್ರಗತಿಪರರೆಲ್ಲರೂ ಸೇರಿ ಗಾಂಧೀಜಿ ನೆನೆಯುವುದೆಂದರೆ ಅವರ ವಿಚಾರಗಳನ್ನು ಹರಡುವುದು ಎಂದರ್ಥ. ನಾವೆಲ್ಲರೂ ಸೇರಿ ಗಾಂಧೀಜಿಯವರ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕೆಂದರು.
ರಿಯಾಜ ಫಾರೂಕಿ ಮಾತನಾಡಿ, ನಮ್ಮ ದೇಶ ಸಂವಿಧಾನವನ್ನು ಹೊಂದಿರುವಂತದ್ದು. ಬಹು ಸಂಸ್ಕೃತಿಗೆ ನಮ್ಮ ದೇಶ ವಿಶ್ವದಲ್ಲೇ ವಿಶೇಷತೆಯನ್ನು ಹೊಂದಿದೆ. ಆದರೆ, ಇಂದಿನ ದಿನ ಕೋಮುವಾದಿಗಳ ಕೈಗೆ ಸಿಕ್ಕು ಅಲ್ಪಸಂಖ್ಯಾತರು ಶೋಷಣೆಗೊಳಗಾಗುತ್ತಿದ್ದಾರೆ. ಇದರ ವಿರುದ್ಧ ಬಲಿಷ್ಠವಾಗಿ ಹೋರಾಟಗಳನ್ನು ಕಟ್ಟುವುದು ಗಾಂಧೀಜಿ ವಿಚಾರ ಇಟ್ಟುಕೊಂಡು ಹೋರಾಟ ಮಾಡುವುದು ಅತ್ಯವಶ್ಯ ಎಂದರು.
ಈ ಸಂದರ್ಭದಲ್ಲಿ ಫಾದರ್ ಟಿಯೋಲಾ ಮಾಚಾದೊ, ಅಥಲ್ವಾ ದ್ರಾಕ್ಷಿ, ಮುತ್ತು ಭೋವಿ, ನಿರ್ಮಲಾ ಹೊಸಮನಿ, ಪಾಟೀಲ, ಹಮೀದ್ ಪಾಟೀಲ, ಕೃಷ್ಣಾ ಜಾಧವ, ರೇಷ್ಮಾ ಪಡಗನ್ನವರ, ಸಿ.ಬಿ. ಪಾಟೀಲ, ಬೀರಪ್ಪ ಜಮಾನಾಳ, ರುಕುಮುದ್ದಿನ್ ತೋರವಿ, ಇಬ್ರಾಯಿಮ ಮಸಾಗನಾಳ, ವರ್ಷ ಭೋವಿ, ಬಾಳು ಜೇವೂರು ಇತರರು ಉಪಸ್ಥಿತರಿದ್ದರು.