ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಕೇಸರಿ ಧ್ವಜ ತೆಗೆದು, ರಾಷ್ಟ್ರಧ್ವಜ ಹಾರಿಸಿದ್ದರ ವಿರುದ್ಧ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸೃಷ್ಠಿಸಿದ ವಿವಾದಕ್ಕೆ ಜೆಡಿಎಸ್ ಕೂಡ ಬೆಂಬಲ ನೀಡಿದೆ. ಕೆರಗೋಡು ಗ್ರಾಮ ಪಂಚಾಯತಿಯ ಧ್ವಜಸ್ಥಂಭದಲ್ಲಿ ಕೇಸರಿ ಧ್ವಜವನ್ನೇ ಹಾರಿಸುತ್ತೇವೆಂದು ಕೆಲವು ಹಿಂದುತ್ವ ಕೋಮುವಾದಿ ಕಾರ್ಯಕರ್ತರು ದಂಧಲೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ, ಕೆರಗೋಡು ಗ್ರಾಮದ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವದಂದು ಗ್ರಾಮ ಪಂಚಾಯತಿ ಎದುರು ಸರ್ಕಾರಿ ಭೂಮಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆಂದು ಅನುಮತಿ ಪಡೆದು, ಅಂದು ಸಂಜೆ ಕೇಸರಿ ಧ್ವಜ ಹಾರಿಸಲಾಗಿತ್ತು. ಅದನ್ನು ತೆರವುಗೊಳಿಸಿದ್ದ ಜಿಲ್ಲಾಡಳಿತ, ರಾಷ್ಟ್ರಧ್ವಜ ಹಾರಿಸಿತ್ತು. ಅದನ್ನು ಬಿಜೆಪಿ ವಿವಾದಗೊಳಿಸಿದ್ದು, ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆಂದು ಹಿಂದುತ್ವವಾದಿಗಳು ದಾಂಧಲೆ ನಡೆಸುತ್ತಿದ್ದಾರೆ.
ವಿವಾದಕ್ಕೆ ಮತ್ತಷ್ಟು ಪುಷ್ಠಿಕೊಟ್ಟಿರುವ ಬಿಜೆಪಿ, ಮನೆಗಳ ಮೇಲೆ ಕೇಸರಿ ಧ್ವಜ ಹಾರಿಸುವ ಅಭಿಯಾನ ಆರಂಭಿಸಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಕೆರೆಗೋಡು ಗ್ರಾಮದಲ್ಲಿ ಮನೆಗಳ ಮೇಲೆ ಕೇಸರಿ ಧ್ವಜ ಕಟ್ಟಿ ಅಭಿಯಾನ ಶುರು ಮಾಡಿದ್ದಾರೆ.
“ಮನೆಗಳ ಮೇಲೆ ಕೇಸರಿ ಧ್ವಜ ಕಟ್ಟುವ ಅಭಿಯಾನವನ್ನು ಜಿಲ್ಲೆಯಾದ್ಯಂತ ನಡೆಸುತ್ತೇವೆ” ಎಂದು ಇಂದ್ರೇಶ್ ಹೇಳಿದ್ದಾರೆ.