ಸರ್ಕಾರಿ ಶಾಲೆಗೆ ಮೀಸಲಿಟ್ಟ ಜಾಗ ಒತ್ತುವರಿಯಾಗಿರುವುದನ್ನು ತೆರವುಗೊಳಿಸದಿದ್ದರೆ ರಾಯಚೂರು ಜಿಲ್ಲೆ ಉಸ್ತುವಾರಿ ಸಚಿವರ ವಿರುದ್ದ ಗೋ ಬ್ಯಾಕ್ ಹೋರಾಟ ನಡೆಸಲಾಗುತ್ತದೆ ಎಂದು ದಲಿತ ಮತ್ತು ಪ್ರತಗತಿಪರ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಅಶೋಕ ಜೈನ್ ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ನಗರದ ವಾರ್ಡ್ ನಂ.28ರ ಸಂತೋಷಿ ನಗರದ ಬಡಾವಣೆಯಲ್ಲಿ ಸರ್ವೆ ನಂ. 384/1/ಎ ನಾಗರಿಕ ಕೋಟಾದಲ್ಲಿ ಇರುವ ಜಾಗದಲ್ಲಿ ಕನ್ನಡ ಶಾಲೆಗೆ ಮಂಜೂರಾಗಿದ್ದು, ಕನ್ನಡ ನಿರ್ಮಾಣಕ್ಕೆ ಈಗಾಗಲೇ ಪಿಡಬ್ಲ್ಯೂಡಿ ಇಲಾಖೆಗೆ ಕಾಮಗಾರಿ ವಹಿಸಲಾಗಿದೆ. ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಶಾಲಾ ಕಟ್ಟಡ ಪ್ರಾರಂಭಿಸಬೇಕು” ಎಂದು ಒತ್ತಾಯಿಸಿದರು.
“ಕನ್ನಡ ಶಾಲೆಗಾಗಿ ಮೀಸಲಿಟ್ಟ ಜಾಗದಲ್ಲಿ ವೆಂಕಟೇಶ ಎನ್ನುವವರು ಒತ್ತುವರಿ ಮಾಡಿಕೊಂಡು ಟಿನ್‌ಶೆಡ್ ನಿರ್ಮಾಣ ಮಾಡಿ, ಆ ಶೆಡ್‌ಗೆ ಬಣ್ಣ ಬಳಿದು ದೇವಸ್ಥಾನವನ್ನಾಗಿ ಮಾರ್ಪಡಿಸಲು ಮುಂದಾಗಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಸರ್ಕಾರಿ ಪ್ರೌಢಶಾಲೆ ಎಲ್‌ಬಿಎಸ್ ನಗರದ ಕನ್ನಡ ಮಾಧ್ಯಮ ಶಾಲೆಗೆ 1017.45. ಚದರ ಅಡಿ ಖಾಲಿ ನಿವೇಶನ ಜಾಗವು ಈ ಹಿಂದೆ ಆರ್‌ಡಿಎಯಿಂದ ಹಂಚಿಕೆಯಾಗಿದೆ” ಎಂದರು.
“ಕೆಲ ಬಡಾವಣೆಯಲ್ಲಿನ ಕುತಂತ್ರದಿಂದ ದೇವರು ಮತ್ತು ದೇವಸ್ಥಾನದ ಹೆಸರಿನಲ್ಲಿ ನಿವೇಶನ ಕಬಳಿಸಲು ಹುನ್ನಾರ ನಡೆಸಿದ್ದಾರೆ” ಎಂದು ಆರೋಪಿಸಿದರು.
“ಮನೆ ನಿರ್ಮಾಣಕ್ಕೆ ತಾತ್ಕಾಲಿಕ ಟಿನ್‌ಶೆಡ್ ನಿರ್ಮಿಸಿ ಕೆಲಸ ಮಾಡುವ ವಸ್ತುಗಳನ್ನು ಇರಿಸಲಾಗಿತ್ತು. ಇದೀಗ ಆ ಶೆಡ್‌ಗೆ ಬಣ್ಣ ಬಳಿದು ದೇವಸ್ಥಾನವನ್ನಾಗಿ ಮಾರ್ಪಡಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದಲ್ಲದೆ, ಸರ್ಕಾರಿ ಶಾಲೆಗೆ ಮೀಸಲಿಟ್ಟ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ” ಎಂದು ದೂರಿದರು.
“ಟಿನ್‌ಶೆಡ್ ತೆರವುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಶಿಕ್ಷಣ ಇಲಾಖೆ ಹಾಗೂ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಕುಂಟು ನೆಪಗಳನ್ನು ಒಡ್ಡುತ್ತಿದ್ದಾರೆಯೇ ಹೊರತು ತೆರವುಗೊಳಿಸಲು ಮುಂದಾಗಿಲ್ಲ. ಉಸ್ತುವಾರಿ ಸಚಿವರೇ ಖುದ್ದಾಗಿ ತೆರವುಗೊಳಿಸಿ, ಒತ್ತುವರಿ ಮಾಡಿದವರ ವಿರುದ್ಧ ದೂರು ದಾಖಲಿಸಲು ಆದೇಶ ನೀಡಿದರೂ ಸಚಿವರ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕ ಶಿವರಾಜ ಪಾಟೀಲ್ ಇದಕ್ಕೆ ಅಡ್ಡಗಾಲು ಹಾಕಿ ವೆಂಕಟೇಶ ಎನ್ನಯವವರಿಂದ ಒತ್ತುವರಿ ಮಾಡಿಸಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರಿ ಶಾಲೆಯನ್ನು ಉಳಿಸಿ ಬೆಳಸಬೇಕಾದವರೇ ಅಳಿಸಲು ಮುಂದಾಗಿದ್ದು ಶೋಚನೀಯ. ವೆಂಕಟೇಶ ಎನ್ನುವವರಿಂದ ಒತ್ತುವರಿ ಮಾಡಿಸಿ ಇದಕ್ಕೆ ₹15 ಲಕ್ಷ ಖರ್ಚು ಮಾಡಿದ್ದಾರೆಂದು ತಿಳಿದುಬಂದಿದೆ. ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಮುಂದಾಗದೇ ಇದ್ದಲ್ಲಿ ಗೋ ಬ್ಯಾಕ್ ಚಳವಳಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಎಸ್ ನರಸಿಂಹಲು ಮಾತನಾಡಿ, “ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ನೀಡಿದ ಜಾಗದಲ್ಲಿ ಶಾಲಾ ಕಟ್ಟಡ ಕಡ್ಡದೆ ಶಾಲೆಯನ್ನೇ ಬೇರೆ ಕಡೆ ಸ್ಥಳಾಂತರ ಮಾಡಲು ಶಾಸಕರು ಪತ್ರ ಬರೆದಿದ್ದು, ಇದರಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಶಾಲೆಯ ಕಟ್ಟಡವಿಲ್ಲದೆ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 600 ಮಂದಿ ಮಕ್ಕಳು ಅಲ್ಪ ಸಂಖ್ಯಾಂತರ ಇಲಾಖೆಯ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಹಿತ ಕಾಪಾಡದೇ ಒತ್ತುವರಿ ಮಾಡಿಸಿದವರಿಗೆ ಪ್ರೋತ್ಸಾಹಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ” ಎಂದು ಆರೋಪಿಸಿದರು.
“ತಮ್ಮ ಹಿಂಬಾಲಕರು, ವ್ಯಾಪಾರಸ್ಥರ ಪರವಾಗಿ ನಿಂತು ಅವರ ಪರ ವಕಾಲತ್ತು ಮಾಡಿದ್ದು ನಾಚಿಕೆಗೇಡಿತನವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿನಿಲಯದ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಅಂಬಾಜಿ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ ನಗರದಲ್ಲಿ ಮಾತ್ರ ಬಿಜೆಪಿ ಸರ್ಕಾರವಿದೆ. ಐಎಎಸ್, ಐಪಿಎಸ್ ಅಧಿಕಾರಿಗಳೇ ಇವರು ಹೇಳಿದಂತೆ ಮಾಡುವಂತಾಗಿದೆ. ಸರ್ಕಾರದ ಉಸ್ತುವಾರಿ ಸಚಿವರೂ ಕೂಡ ಶಾಸಕರ ಬೆಂಬಲಕ್ಕೆ ನಿಂತಿದ್ದಾರೆ. ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಮುಂದೆ ತರುವ ಕೆಲಸ ಮಾಡಬೇಕು. ಆದರೆ ಇದಕ್ಕೆ ಅಡ್ಡಗಾಲು ಹಾಕಲಾಗಿದೆ. ಕೂಡಲೇ ಟಿನ್‌ಶೆಡ್ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸದಿದ್ದಲ್ಲಿ ʼಉಸ್ತುವಾರಿ ಸಚಿವರೇ ಗೋ ಬ್ಯಾಕ್ʼ ಹೋರಾಟ ಮಾಡಲಾಗುತ್ತದೆ” ಎಂದು ತಿಳಿಸಿದರು.
ಕೆ ರಂಗನಾಥ, ಶಿವುಕುಮಾರ ಯಾದವ್, ಶ್ರೀನಿವಾಸ ಕಲವಲದೊಡ್ಡಿ, ಮಹೆಬೂಬ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ