ಪೊಲೀಸ್ ಠಾಣೆಯಿಂದ ಕಳ್ಳತನ ಆರೋಪಿ ತಪ್ಪಿಸಿಕೊಂಡಿದ್ದ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಪಿಎಸ್‌ಐ ದೇವಿಕಾದೇವಿ ಸೇರಿದಂತೆ ಮೂವರು ಹೆಡ್ ಕಾನ್ಸ್‌ಟೆಬಲ್, ಓರ್ವ ಕಾನ್ಸ್‌ಟೆಬಲ್ ಸೇರಿ ಒಟ್ಟು ಐವರನ್ನು ಅಮಾನತು ಮಾಡಲಾಗಿದೆ. ಐವರನ್ನು ಅಮಾನತು ಮಾಡಿ ಎಸ್‌ಪಿ ಕೆ.ವಿ ಅಶೋಕ್ ಆದೇಶ ಹೊರಡಿಸಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದ ಆರೋಪಿ ಸೈಯದ್ ಖಾನ್ ನದಾಫ್ ಎಂಬಾತ ಸಿಆರ್ ನಂ. 13/2024ರ ಪ್ರಕರಣದಲ್ಲಿ ಆರೋಪಿಯಾಗಿದ್ದ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು ಬೆಂಗಳೂರಿನಲ್ಲಿ ಬಂಧಿಸಿ ವಿಚಾರಣೆಗೆ ಗುಬ್ಬಿಗೆ ಕರೆತಂದಿದ್ದು, ವಿಚಾರಣೆಗೆ ಒಳಪಡಿಸಲಾಗಿತ್ತು. ಕಳೆದ ಗುರುವಾರ ತಡರಾತ್ರಿ ಠಾಣೆಯಿಂದ ಪೊಲೀಸರ ಕಣ್ಣು ತಪ್ಪಿಸಿ ಆರೋಪಿ ಸೈಯದ್ ಪರಾರಿಯಾಗಿದ್ದ. ಈ ಹಿನ್ನಲೆಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಸಿಬ್ಬಂದಿ ಹಾಗೂ ಪಿಎಸ್‌ಐ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆ ಜಾಗ ಒತ್ತುವರಿ ತೆರವುಗೊಳಿಸಲು ಒತ್ತಾಯ
ಗುಬ್ಬಿ ಪೊಲೀಸ್ ಠಾಣೆಯಿಂದ ಪರಾರಿಯಾದ ಆರೋಪಿ ಹುಡುಕಾಟ ನಡೆಸಿದ್ದ ಪೊಲೀಸರು, ಮೂರು ತಂಡವಾಗಿ ತೀವ್ರ ಶೋಧ ನಡೆಸಿದ್ದ ವೇಳೆ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ತುಮಕೂರು ಬಳಿ ಆತನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂರು ವರ್ಷದಲ್ಲಿ ಮೂವರು ಪಿಎಸ್‌ಐ ಅಮಾನತು
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರತ ಪಿಎಸ್‌ಐ ಅಮಾನತುಗೊಂಡ ಮೂರನೇ ಪ್ರಕರಣ ಇದಾಗಿದೆ. ಕಳೆದ ಮೂರು ವರ್ಷದಲ್ಲಿ ಪಿಎಸ್‌ಐಗಳಾದ ಜ್ಞಾನಮೂರ್ತಿ, ನಟರಾಜ್ ಹಾಗೂ ದೇವಿಕಾದೇವಿ ಕರ್ತವ್ಯ ಲೋಪದಡಿ ಅಮಾನತುಗೊಂಡಿದ್ದಾರೆ.