ಹದಿನೇಳನೇ ಲೋಕಸಭೆಯ ಕೊನೆಯ ಅಧಿವೇಶನದ ಅಂತಿಮ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಲು ಭಾಷಣ ಮಾಡಲು ಎದ್ದುನಿಂತ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಿಂದಲೇ ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಿದರು.
ಬಜೆಟ್ನಲ್ಲಿ ವಿಪಕ್ಷಗಳು ಮುಂದಿಟ್ಟಿರುವ ರಾಜ್ಯಗಳಿಗೆ ಅನುದಾನ ಹಂಚಿಕೆ ವಿಚಾರವಾಗಲಿ, ದಕ್ಷಿಣ ಮತ್ತು ಉತ್ತರದ ನಡುವಿನ ಅನುದಾನ ಹಂಚಿಕೆಯಲ್ಲಿನ ತಾರತಮ್ಯಗಳ ಬಗ್ಗೆ ಸೊಲ್ಲೆತ್ತಲಿಲ್ಲ. ಬದಲಾಗಿ ತಮ್ಮ ಬಜೆಟ್ ಭಾಷಣವನ್ನು ಸಂಪೂರ್ಣ ಚುನಾವಣಾ ಭಾಷಣವನ್ನಾಗಿ ಪರಿವರ್ತಿಸಿಕೊಂಡರು.
ವಿಪಕ್ಷಗಳ ಟೀಕೆಯ ವೇದಿಕೆಯಾದ ಸಂಸತ್ತು
ನರೇಂದ್ರ ಮೋದಿ ಅವರು ತಮ್ಮ ಮಾತಿನುದ್ದಕ್ಕೂ ವಿಪಕ್ಷಗಳನ್ನು ಟೀಕಿಸುವ ರಾಜಕೀಯ ಮಾತುಗಳನ್ನು ಆಡಿದರು. ಪ್ರಧಾನಿಯ ಕೊನೆಯ ಭಾಷಣ ಕೇವಲ ಕಾಂಗ್ರೆಸ್, ಇಂಡಿಯಾ ಒಕ್ಕೂಟ, ಮಾಜಿ ಪ್ರಧಾನಿಗಳಾದ ಜವಾಹರ್ಲಾಲ್ ನೆಹರು, ಇಂದಿರಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸುವುದೇ ಆಗಿತ್ತು.
“ಪ್ರತಿಪಕ್ಷದವರು ಇನ್ನಷ್ಟು ಸಮಯ ವಿರೋಧ ಪಕ್ಷದ ಗ್ಯಾಲರಿಯಲ್ಲೇ ಕುಳಿತುಕೊಳ್ಳುವ ಪ್ರಯತ್ನದಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ಚುನಾವಣೆಯ ನಂತರ, ನೀವು (ಕಾಂಗ್ರೆಸ್) ಪ್ರೇಕ್ಷಕರ ಗ್ಯಾಲರಿಯಲ್ಲಿರುತ್ತೀರಿ. ವಿರೋಧ ಪಕ್ಷದಲ್ಲಿರುವ ಅನೇಕರು ಚುನಾವಣೆಯಲ್ಲಿ ಹೋರಾಡುವ ಭರವಸೆ, ಶಕ್ತಿಯನ್ನು ಕಳೆದುಕೊಂಡಿರುವುದನ್ನು ನಾನು ನೋಡುತ್ತಿದ್ದೇನೆ. ಲೋಕಸಭೆಯ ಬದಲು ಆರ್ಎಸ್ಎಸ್ಗೆ ಹೋಗಲು ಹಲವರು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ, ಅವರು ವಿಷಯಗಳ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದಾರೆ. ರಾಷ್ಟ್ರಪತಿಗಳ ಭಾಷಣವು ಒಂದು ರೀತಿಯಲ್ಲಿ ಸತ್ಯ, ವಾಸ್ತವವನ್ನು ಆಧರಿಸಿದೆ. ಜನರ ಮುಂದೆ ಪ್ರಸ್ತುತಪಡಿಸಲಾದ ವಾಸ್ತವದ ದೊಡ್ಡ ಪುರಾವೆಯಾಗಿದೆ” ಎಂದು ಮೋದಿ ಹೇಳಿದ್ದಾರೆ.
ಮತ್ತೆ ಮಾಜಿ ಪ್ರಧಾನಿಗಳ ಟೀಕೆ
“ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ್ದರು. ಭಾರತೀಯರು ಯೂರೋಪ್, ಜಪಾನ್ ಅಥವಾ ಚೀನಾ, ರಷ್ಯಾ, ಅಮೆರಿಕ ಜನರ ರೀತಿ ಹೆಚ್ಚು ಕಷ್ಟಕರವಾದ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಅದರರ್ಥ ಭಾರತೀಯರು ಸೋಮಾರಿಗಳು ಹಾಗೂ ದಡ್ಡರು ಎಂದು ಲಘುವಾಗಿ ಮಾತನಾಡಿದ್ದರು” ಎಂದು ನರೇಂದ್ರ ಮೋದಿ ಮತ್ತೆ ಇತಿಹಾಸ ಕೆದಕಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಕೂಡ ದೇಶದ ಜನರು ಹೇಗಿರಬೇಕೆಂದು ನಿರ್ಣಯಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಕೂಡ ಇಂದಿಗೂ ಇದನ್ನೇ ಮಾಡುತ್ತಿದೆ. ಅಲ್ಲದೆ ಸೋತಾಗ ಸಂಪೂರ್ಣ ಹತಾಶರಾಗುತ್ತೇವೆ ಎಂದು ಇಂದಿರಾ ಅವರನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ, ಕಾಂಗ್ರೆಸ್ನ ಉತ್ಪನ್ನಗಳು ಮತ್ತೆ ಮತ್ತೆ ಆರಂಭಗೊಂಡರೂ ಯಾವುದೇ ಪರಿಶ್ರಮವಿಲ್ಲದ ಕಾರಣ ಸ್ಥಗಿತಗೊಳ್ಳುತ್ತಿದೆ. ರಾಹುಲ್ ಗಾಂಧಿ ಪ್ರೀತಿಯ ಅಂಗಡಿ ತೆರೆಯುವ ಮಾತನಾಡುತ್ತಿದ್ದಾರೆ. ಅಂಗಡಿ ರಿಲಾಂಚ್ ಮಾಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಸ್ವತಃ ಅಂಗಡಿ ಬಾಗಿಲು ಮುಚ್ಚಲಿದೆ ಎಂದು ಮೋದಿ ಟೀಕಿಸಿದರು.
“ಕಾಂಗ್ರೆಸ್ ಪರಿಸ್ಥಿತಿ ನೋಡಿ. ಖರ್ಗೆ ಅವರು ರಾಜ್ಯಸಭೆಗೆ ತೆರಳಬೇಕಾಯಿತು. ಗುಲಾಂ ನಬಿ ಆಜಾದ್ ಅವರು ಪಕ್ಷವನ್ನು ತೊರೆಯಬೇಕಾಯಿತು. ನಾವು ಮೇಕ್-ಇನ್-ಇಂಡಿಯಾ ಎಂದು ಹೇಳಿದರೆ, ಕಾಂಗ್ರೆಸ್ ರದ್ದು ಮಾಡಿ ಎಂದು ಹೇಳುತ್ತದೆ. ನಾವು ವಂದೇ ಭಾರತ್ ಹೇಳುತ್ತೇವೆ, ಅವರು ಸಂಸ್ಕೃತಿಯನ್ನು ರದ್ದುಗೊಳಿಸುತ್ತಾರೆ ಎಂದು ಹೇಳುತ್ತಾರೆ. ನಾವು ವಿಶ್ವದ ಮೂರನೇ ಆರ್ಥಿಕತೆಯಾಗಿ ಹೊರಹೊಮ್ಮಿದಾಗ, ಪ್ರತಿಪಕ್ಷಗಳು ‘ಇದರಲ್ಲೇನು ಮಹಾ? ಇದು ತಾನಾಗಿಯೇ ನಡೆಯುತ್ತದೆ’ ಎನ್ನುತ್ತಾರೆ. ಇದರಿಂದಾಗಿ ನೀವು ದೇಶದ ಪ್ರಗತಿಯನ್ನು ರದ್ದುಗೊಳಿಸಿದ್ದೀರಿ” ಎಂದು ಕಾಂಗ್ರೆಸ್ ಟೀಕೆಯನ್ನು ಮುಂದುವರಿಸಿದರು
ಚುನಾವಣೆಯಲ್ಲಿ ಗೆಲ್ಲುವ ಸ್ಥಾನದ ಘೋಷಣೆ
ಬಜೆಟ್ ಭಾಷಣ ಮಾಡುತ್ತಿರುವುದನ್ನು ಮರೆತ ಪ್ರಧಾನಿ ಮೋದಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಗಲಿರುವ ಸ್ಥಾನದ ಲೆಕ್ಕಾಚಾರವನ್ನೂ ಸಂಸತ್ತಿನ ಮುಂದಿಟ್ಟರು! “ನಮ್ಮ ಮೂರನೇ ಸರ್ಕಾರ ರಚಿಸಲು ಹಾದಿ ಬಹಳ ದೂರವಿಲ್ಲ. ನಾನು ದೇಶದ ಮನಸ್ಥಿತಿ ನೋಡಿದ್ದೇನೆ. ಮುಂದಿನ ಲೋಕಸಭೆಯಲ್ಲಿ ಎನ್ಡಿಎ 400 ಸ್ಥಾನ ಗೆದ್ದರೆ, ಬಿಜೆಪಿ 370 ಸ್ಥಾನಗಳಲ್ಲಿ ಜಯಗಳಿಸಲಿದೆ” ಎಂದು ಭವಿಷ್ಯನುಡಿದರು. ಜೊತೆಗೆ, ಮೂರನೇ ಅವಧಿಯಲ್ಲಿ ನಾವು ಅತ್ಯಂತ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಮೋದಿ ಸಂಸತ್ ಸದಸ್ಯರಿಗೆ ಮಾತಿನಲ್ಲೇ ಸ್ವರ್ಗ ತೋರಿಸಿದ್ದಾರೆ.