ಸುದ್ದಿ ವಿವರ | ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ನ್ಯಾಯ ಸಿಕ್ಕಿದೆಯೇ?

Date:

Advertisements
ಬಜೆಟ್ ಅಧಿವೇಶನದಲ್ಲಿ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯ ಬಗ್ಗೆ ವಿಪಕ್ಷಗಳ ಆಕ್ಷೇಪಕ್ಕೆ ಸೋಮವಾರ ಸಂಸತ್ತಿನಲ್ಲಿ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿಯೇತರ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ರಾಜ್ಯದ ಬಳಿ ಎಷ್ಟು ಹಣವಿದೆಯೋ ಅಷ್ಟೇ ಖರ್ಚು ಮಾಡುವಂತಹ ಬಜೆಟ್ ರಚಿಸಿ ಎನ್ನುವ ಪುಕ್ಕಟೆ ಸಲಹೆಯನ್ನೂ ಕರ್ನಾಟಕಕ್ಕೆ ನೀಡಿದ್ದಾರೆ. ಈ ಒಟ್ಟಾರೆ ತೆರಿಗೆಪಾಲು ಹಂಚಿಕೆಯ ಚರ್ಚೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

ತೆರಿಗೆ ಪಾಲು ರಾಜಕೀಯದ ಬದಲು ಬಜೆಟ್‌ಗೆ ತಕ್ಕಂತೆ ಹಣ ವ್ಯಯಿಸಿ ಎನ್ನುವ ಸಲಹೆ ಸಚಿವರ ಅಹಂ ಪ್ರದರ್ಶನವೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶೈಲಿಯ ಭಾಷಣದ ಮಾತಿನಲ್ಲೇ ಹೇಳುವುದಾದರೆ, ”ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯ ವಿಧಾನದಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಗಳನ್ನು ಪ್ರದರ್ಶಿಸುವ ಮಾತೇ ಇಲ್ಲ. ಸ್ವಾರ್ಥ ಹಿತಾಸಕ್ತಿಗಳು ಅಂತಹ ಆರೋಪವನ್ನು ಹೊರಿಸಿದ್ದಾರೆ. ಆ ಬಗ್ಗೆ ನಿರ್ಧರಿಸುವ ಸ್ವಾತಂತ್ರ್ಯ ನನಗಿಲ್ಲ. ಹಣಕಾಸು ಆಯೋಗ ಅದಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಖ್ಯಾತೆ ತೆಗೆಯುತ್ತಿದೆ. ದರ ನಿರ್ಧಾರದಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ. ಹಣಕಾಸು ಆಯೋಗ ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಿ ವರದಿ ಸಲ್ಲಿಸುತ್ತದೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಆಧರಿಸಿ ತಾರತಮ್ಯದ ಭಯವಿಲ್ಲದೆ ಹಂಚಿಕೆಯಾಗಬೇಕು. ಹಂಚಿಕೆಯಲ್ಲಿ ಅನ್ಯಾಯವಾಗಿರುವುದು ರಾಜಕೀಯ ಹಿತಾಸಕ್ತಿಯ ದೋಷಾರೋಪಣೆ. ಹಣಕಾಸು ಸಚಿವರು ರಾಜ್ಯದ ಅನುದಾನ ಹಂಚಿಕೆಯಲ್ಲಿ ಮಧ್ಯಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಇದೀಗ ನಿಮ್ಮ ದುಬಾರಿ ಬಜೆಟ್‌ಗೆ ಹಣದ ಕೊರತೆಯಾಗಿದೆಯೆ? ಹಾಗಿದ್ದರೆ ಹಣ ವ್ಯಯಿಸಬೇಡಿ. ಬಜೆಟ್‌ನಲ್ಲಿ ಸಾಧ್ಯವಾಗದ ವೆಚ್ಚವನ್ನು ಮಾಡಲು ಹೋಗಬೇಡಿ. ಅಂತಹ ಪ್ರಯತ್ನಗಳಿಗೆ ಕೇಂದ್ರವನ್ನು ದೂಷಿಸಬೇಡಿ, ಅದಕ್ಕೆ ನಾನು ಉತ್ತರಿಸಬೇಕಾಗಿಲ್ಲ. ಹಣಕಾಸು ಆಯೋಗದ ಜೊತೆಗೆ ನಿಮ್ಮ ಸ್ಥಿತಿ ವಿವರಿಸಿ ಅಗತ್ಯ ಪೂರೈಸಿಕೊಳ್ಳಿ” ಎಂದು ಬಿಡುಬೀಸಾಗಿ ಉತ್ತರಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಕರ್ನಾಟಕದಿಂದಲೇ ಬಿಜೆಪಿಯ ಅಭ್ಯರ್ಥಿಯಾಗಿ ಆಯ್ಕೆಯಾದವರು. ಹಾಗಿರುವಾಗ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೆ ಹಣಕಾಸು ಆಯೋಗವನ್ನು ಪ್ರಶ್ನಿಸಿ ಎಂದು ಅಹಂಕಾರದ ಉತ್ತರವನ್ನು ಸಂಸತ್ತಿನಲ್ಲಿ ನೀಡಿದ್ದಾರೆ. ಹಾಗಿದ್ದರೆ, ಅನುದಾನ ಹಂಚಿಕೆಯ ನಿರ್ಧಾರ ಸಂಪೂರ್ಣವಾಗಿ ಹಣಕಾಸು ಆಯೋಗವೇ ಮಾಡುತ್ತದೆಯೆ? ಭಾರತ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲವೆ?

Advertisements

ಅನುದಾನ ಹಂಚಿಕೆ ಹಣಕಾಸು ಆಯೋಗದ ನಿರ್ಧಾರವೆ?

80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶಕ್ಕೆ 2,18,816 ಕೋಟಿ ಅನುದಾನ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ. ನಿಜವಾಗಿಯೂ ಹಣಕಾಸು ಆಯೋಗ ವಸ್ತುಸ್ಥಿತಿಯ ಪರಿಶೀಲನೆ ನಡೆಸಿ ಈ ಹಂಚಿಕೆ ಮಾಡಿದೆಯೆ? ಸರ್ಕಾರ ಮಧ್ಯಪ್ರವೇಶಿಸಲಿಲ್ಲವೆ? ನೀತಿ ಆಯೋಗದ ಮಾಜಿ ಅಧ್ಯಕ್ಷರೊಬ್ಬರು ಕೆಲ ವರ್ಷಗಳ ಹಿಂದೆ ಬಹಿರಂಗಪಡಿಸಿರುವ ವಿವರಗಳು ಬೇರೆಯೇ ಸಂದೇಶ ರವಾನಿಸುತ್ತದೆ.

ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕೇಂದ್ರದ ಉಪನ್ಯಾಸವೊಂದರಲ್ಲಿ ಮೋದಿ ಸರ್ಕಾರವೇ ರಚಿಸಿದ ನೀತಿ ಆಯೋಗದ ಮಾಜಿ ಅಧ್ಯಕ್ಷ ಬಿವಿಆರ್ ಸುಬ್ರಹ್ಮಣ್ಯಂ ಅವರು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಿಂದ ಪ್ರಧಾನಿಯಾಗುತ್ತಲೇ ಹೇಗೆ ರಾಜ್ಯಗಳ ತೆರಿಗೆ ಪಾಲಿನ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದರು ಎನ್ನುವುದನ್ನು ಬಹಿರಂಗಪಡಿಸಿದ್ದರು.

ರಿಪೋರ್ಟರ್ಸ್‌ ಕಲೆಕ್ಟಿವ್ ಮಾಧ್ಯಮಗಳಿಗಾಗಿ ಮಾಡಿರುವ ತನಿಖಾ ವರದಿ ಕೂಡ ಸುಬ್ರಹ್ಮಣ್ಯಂ ಅವರು ಮುಂದಿಟ್ಟ ವಿವರಗಳಿಗೆ ಸಾಕ್ಷ್ಯ ನೀಡಿದೆ. ಆ ವಿವರಗಳ ಪ್ರಕಾರ, 2013ರಲ್ಲಿ 14ನೇ ಹಣಕಾಸು ಆಯೋಗ ಸ್ಥಾಪನೆಯಾಗುವ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ರಾಜ್ಯಗಳಿಗೆ ಕೇಂದ್ರದ ತೆರಿಗೆಯ ಶೇ 50ರಷ್ಟು ಪಾಲು ಕೊಡಬೇಕು ಎಂದು ಒತ್ತಾಯಿಸಿದ್ದರು. ನರೇಂದ್ರ ಮೋದಿಯವರ ಹೇಳಿಕೆ ಸುದ್ದಿಪತ್ರಿಕೆಗಳಲ್ಲಿ ದೊಡ್ಡ ಪ್ರಚಾರವನ್ನೇ ಪಡೆದಿತ್ತು.

ನಂತರ 2014ರ ಡಿಸೆಂಬರ್‌ನಲ್ಲಿ 14ನೇ ಹಣಕಾಸು ಆಯೋಗ ಕೇಂದ್ರದ ತೆರಿಗೆಯಿಂದ ರಾಜ್ಯಗಳಿಗೆ ಸಿಗುತ್ತಿರುವ ಶೇ 32ರಷ್ಟು ಪಾಲನ್ನು ಶೇ 42ರಷ್ಟು ಏರಿಸಬೇಕು ಎಂದು ಶಿಫಾರಸು ಮಾಡಿತ್ತು, ಆದರೆ ವರದಿ ಬಹಿರಂಗವಾಗಿರಲಿಲ್ಲ. ಆದರೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಭಾರತೀಯ ಹಣಕಾಸು ಆಯೋಗದ ಮೇಲೆ ಪ್ರಭಾವ ಬೀರಲು ಹಿಂಬಾಗಿಲಿನ ಚರ್ಚೆಗೆ ಮುಂದಾಗಿದ್ದರು. ಅವರು ಕೇಂದ್ರದ ತೆರಿಗೆಯಿಂದ ರಾಜ್ಯಗಳಿಗೆ ಶೇ 33ರಷ್ಟು ಪಾಲು ಸಿಗಬೇಕು ಎಂದು ವರದಿ ಬದಲಿಸಲು ಸೂಚಿಸಿದರು. ಆದರೆ ಆಗ ಹಣಕಾಸು ಆಯೋಗ ತನ್ನ ವರದಿಯನ್ನು ಬದಲಿಸಲು ಒಪ್ಪಿರಲಿಲ್ಲ. ಹೀಗಾಗಿ ಸರ್ಕಾರ ಆಯೋಗದ ಶೇ 42ರಷ್ಟು ಪಾಲಿನ ಶಿಫಾರಸನ್ನು ಒಪ್ಪಿಕೊಳ್ಳಬೇಕಾಗಿ ಬಂದಿತ್ತು.

ತದನಂತರ, 2015ರಲ್ಲಿ ಸಂಸತ್ತಿನ ಮುಂದೆ ರಾಜ್ಯಗಳ ಪಾಲನ್ನು ಏರಿಸಿದ್ದು ತಮ್ಮ ಸಾಧನೆ ಎಂದು ಮೋದಿ ಸ್ವಯಂ ಬೆನ್ನುತಟ್ಟಿಕೊಂಡಿದ್ದರು. ”ರಾಷ್ಟ್ರವನ್ನು ಬಲಪಡಿಸಲು ನಾವು ರಾಜ್ಯಗಳನ್ನು ಬಲಪಡಿಸಬೇಕು. ಹಣಕಾಸು ಆಯೋಗದ ಸದಸ್ಯರಲ್ಲಿ ರಾಜ್ಯಗಳ ಪಾಲಿನ ಬಗ್ಗೆ ಭಿನ್ನಮತವಿದೆ. ಆದರೆ ರಾಜ್ಯಗಳನ್ನು ಬಲಪಡಿಸುವುದು ನಮ್ಮ ಬದ್ಧತೆ. ಹೀಗಾಗಿ ರಾಜ್ಯಗಳಿಗೆ ಶೇ 42ರಷ್ಟು ಪಾಲು ನೀಡಲಿದ್ದೇವೆ” ಎಂದು ಘೋಷಿಸಿದ್ದರು.

ನಂತರ 2015-16ರಲ್ಲಿ 15ನೇ ಹಣಕಾಸು ಆಯೋಗ ರಚಿಸಿದಾಗ ರಾಜ್ಯಗಳ ಪಾಲನ್ನು ಶೇ 41ಕ್ಕೆ ಇಳಿಸಲಾಯಿತು. 14ನೇ ಹಣಕಾಸು ಆಯೋಗದಲ್ಲಿ ಶೇ 4.71ರಷ್ಟಿದ್ದ ಕರ್ನಾಟಕದ ಪಾಲು, 15ನೇ ಹಣಕಾಸು ಆಯೋಗದಲ್ಲಿ ಶೇ 3.64ಕ್ಕೆ ಇಳಿಯಿತು. ಹೀಗೆ ಶೇ 1.07 ಇಳಿಕೆಯಾದ ಕಾರಣ ಈ ವರ್ಷದ ಎಣಿಕೆಯೂ ಸೇರಿ ಐದು ವರ್ಷಗಳಲ್ಲಿ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ರೂ 62,098 ಕೋಟಿ ಕಳೆದುಕೊಂಡಿದೆ ಎಂದು ರಾಜ್ಯ ಸರ್ಕಾರ ಇದೀಗ ತಿಳಿಸಿದೆ. 

ಇದನ್ನೂ ಓದಿ? ಕೆಜಿ ಅಕ್ಕಿಗೆ ರೂ 29 | ‘ಅನ್ನಭಾಗ್ಯ’ಕ್ಕೆ ಕಲ್ಲು ಹಾಕುವ ಮೋದಿ ಸರ್ಕಾರದ ಚುನಾವಣಾ ತಂತ್ರಗಾರಿಕೆ

ವಿಶೇಷ ಅನುದಾನಕ್ಕೆ ಕಲ್ಲು ಹಾಕಿದರೇ ನಿರ್ಮಲಾ ಸೀತಾರಾಮನ್‌?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಫೆಬ್ರವರಿ 6) ಪತ್ರಿಕಾಗೋಷ್ಠಿ ನಡೆಸಿ, ”15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ನಷ್ಟವನ್ನು ಗಮನಿಸಿದ ಹಣಕಾಸು ಆಯೋಗ ವಿಶೇಷ ಅನುದಾನವಾಗಿ ರಾಜ್ಯಕ್ಕೆ ರೂ 5,495 ಕೋಟಿ ನೀಡಬೇಕು ಎಂದು ಮಧ್ಯಂತರ ವರದಿಯನ್ನು ನೀಡಿತ್ತು. ಮತ್ತು ಜಲಮೂಲಗಳು, ಹೊರ ವರ್ತುಲ ರಿಂಗ್‌ರೋಡ್‌ ಮೊದಲಾದ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚುವರಿ ರೂ 6,000 ಕೋಟಿ ವಿಶೇಷ ಅನುದಾನ ನೀಡುವಂತೆ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ತಿಳಿಸಿದೆ. ಆದರೆ ಆಗ ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ಶಿಫಾರಸನ್ನು ತಿರಸ್ಕರಿಸಿದರು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಕರ್ನಾಟಕ ಸರ್ಕಾರದ ಇಂತಹ ಆರೋಪವನ್ನು ನಿರಾಕರಿಸಿದ್ದರೂ, ”15ನೇ ಹಣಕಾಸು ಆಯೋಗದಲ್ಲಿ ಮತ್ತು ರಾಜ್ಯಕ್ಕೆ ಸಿಗಬೇಕಾಗಿದ್ದ ವಿಶೇಷ ಅನುದಾನ ತಿರಸ್ಕರಿಸಿದ ಕಾರಣದಿಂದ ರಾಜ್ಯಕ್ಕೆ ಒಟ್ಟು ರೂ 73,593 ಕೋಟಿಗಳಷ್ಟು ನಷ್ಟವಾಗಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. 

ಮುಖ್ಯಮಂತ್ರಿಯವರ ಪ್ರಕಾರ, ಕೇಂದ್ರ ಸರ್ಕಾರದಿಂದ ಸಿಗಬೇಕಾಗಿದ್ದ ಜಿಎಸ್‌ಟಿ ಪರಿಹಾರವೂ ನಿಂತಿರುವುದರಿಂದ ರಾಜ್ಯಕ್ಕೆ ಇನ್ನಷ್ಟು ನಷ್ಟವಾಗಿದೆ. ಕರ್ನಾಟಕದಿಂದ ರೂ 4.30 ಲಕ್ಷ ಕೋಟಿಗಳಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಮಹಾರಾಷ್ಟ್ರದ ನಂತರ ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ಈ ವರ್ಷ ತೆರಿಗೆ ಪಾಲಿನಲ್ಲಿ ಮತ್ತು ಕೇಂದ್ರದಿಂದ ಪ್ರಾಯೋಜಿತ ಯೋಜನೆಗಳ ಅನುದಾನಗಳಲ್ಲಿ ಒಟ್ಟು ರೂ 50,257 ಕೋಟಿಯನ್ನಷ್ಟೇ ರಾಜ್ಯ ಪಡೆದುಕೊಂಡಿದೆ. ಅಂದರೆ ಕರ್ನಾಟಕದಿಂದ ಕೇಂದ್ರಕ್ಕೆ ರೂ 100 ಕಳುಹಿಸಿದರೆ, ರೂ 12-13ರಷ್ಟು ಮರಳಿ ಸಿಗುತ್ತಿದೆ. ಉಳಿದ ಮೊತ್ತ ಕೇಂದ್ರದ ಬಳಿ ಉಳಿದುಕೊಳ್ಳುತ್ತದೆ.

ಯಾವ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚು ಪಾಲು?

ಕರ್ನಾಟಕ ಸರ್ಕಾರ ಅಧಿಕೃತವಾಗಿ ಮುಂದಿಟ್ಟಿರುವ ಅಂಕಿ-ಅಂಶಗಳ ಪ್ರಕಾರ 2017-18ರಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ 2.2ರಷ್ಟಿತ್ತು. ಆದರೆ 2024-25ರಲ್ಲಿ ಬಜೆಟ್ ಗಾತ್ರ ದ್ವಿಗುಣಗೊಳಿಸಿದಾಗಲೂ ಅದನ್ನು ಕೇಂದ್ರದ ಮೋದಿ ಸರ್ಕಾರ ಶೇ 1.23ಗೆ ಇಳಿಸಿದೆ.

ರಾಜ್ಯಸರ್ಕಾರ ಬರಪೀಡಿತ ಪ್ರದೇಶಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ರೂ 35,000 ಕೋಟಿ ಮೌಲ್ಯದ ರೂ 17,901 ಕೋಟಿಯಷ್ಟು ರಾಷ್ಟ್ರೀಯ ದುರಂತ ಪ್ರತಿಕ್ರಿಯಾ ನಿಧಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಕಳೆದ ವರ್ಷದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5,300 ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಕರ್ನಾಟಕ ಸರ್ಕಾರದ ಪ್ರಕಾರ, ಈವರೆಗೆ ಕೇಂದ್ರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿ ಕೂಡ ದೊರೆತಿಲ್ಲ.

ಉತ್ತರ ಮತ್ತು ದಕ್ಷಿಣದ ವಿಭಜನೆಯ ಚರ್ಚೆಯೇಕೆ?

ರಾಜ್ಯದ ಗಾತ್ರ, ಹೆಚ್ಚಿನ ಜನಸಂಖ್ಯೆ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ ಪರಿಗಣಿಸಿ, ಅಂತಹ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲನ್ನು ನೀಡುವ ರೀತಿಯಲ್ಲಿ 13ನೇ, 14ನೇ ಮತ್ತು 15ನೇ ಹಣಕಾಸು ಆಯೋಗ ಹಂಚಿಕೆ ಮಾಡಿದೆ. ಹೀಗಾಗಿ ರಾಜ್ಯದ ಶ್ರೇಯಾಂಕವನ್ನು 13ನೇ ಹಣಕಾಸು ಆಯೋಗ ಶೇ 17.5 ಎಂದು ಪರಿಗಣಿಸಿದರೆ, 14ನೇ ಹಣಕಾಸು ಆಯೋಗ ಶೂನ್ಯ ಮತ್ತು 15ನೇ ಹಣಕಾಸು ಆಯೋಗ ಶೇ 15 ಎಂದು ಪರಿಗಣಿಸಿದೆ. ಇದೇ ಕಾರಣದಿಂದ ಉತ್ತರ ಮತ್ತು ದಕ್ಷಿಣ ಎನ್ನುವ ವಿಭಜನೆಯ ಚರ್ಚೆಯಾಗುತ್ತಿದೆ.

ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣಿಯನ್ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಇದೇ ವಿಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚು ಸೂಕ್ತವಾಗಿ ತೆರಿಗೆ ಪಾಲಿನ ಹಂಚಿಕೆಯಾಗಬೇಕು ಎಂದು ಅವರು ತಿಳಿಸಿದ್ದರು.

ನ್ಯಾಯಯುತ ಹಂಚಿಕೆಗೆ ವಿಶ್ಲೇಷಕರ ಸಲಹೆಗಳೇನು?

ತೆರಿಗೆ ಪಾಲಿನ ಹಂಚಿಕೆ ಎಂದರೆ ರಾಜ್ಯಗಳಿಗೆ ಸಿಗಬೇಕಾದ ಪಾಲನ್ನು ಕೇಂದ್ರದಿಂದ ಮರಳಿಸುವುದು ಎನ್ನುವ ವಿಶ್ಲೇಷಣೆ ಸೂಕ್ತವಲ್ಲ. ಅಂತಿಮವಾಗಿ ಭಾರತದಾದ್ಯಂತ ಆರ್ಥಿಕ ಚಟುವಟಿಕೆಯಿಂದ ಸಂಗ್ರಹವಾಗಿರುವ ಹಣವನ್ನು ರಾಷ್ಟ್ರೀಯ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.

ಆರ್ಥಿಕ ಪ್ರಗತಿ ನಿಧಾನಗತಿಯಲ್ಲಿರುವ ರಾಜ್ಯಗಳ ಆರ್ಥಿಕ ಚಟುವಟಿಕೆಗೆ ನೆರವಾಗಲು ಹೆಚ್ಚಿನ ತೆರಿಗೆ ಪಾಲನ್ನು ನೀಡಬೇಕಾಗಿತ್ತು. ಆದರೆ ಹಾಗಾಗದೆ, ಉತ್ತರ ಪ್ರದೇಶ ಮತ್ತು ಬಿಹಾರದ ಉದಾಹರಣೆ ತೆಗೆದುಕೊಂಡಲ್ಲಿ, ಅತ್ಯಧಿಕ ಶೇ 18 ಮತ್ತು ಶೇ 10ರಷ್ಟು ತೆರಿಗೆ ಪಾಲನ್ನು ಪಡೆದರೂ ತಲಾ ಆದಾಯದಲ್ಲಿ ಅತಿ ಕಡಿಮೆ ಪ್ರಗತಿ ತೋರಿಸಿವೆ. ಮತ್ತೊಂದೆಡೆ ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳು ಅತ್ಯಧಿಕ ಪ್ರಗತಿ ದರ ಸಾಧಿಸಿದರೂ ಶೇ. 3-5ರಷ್ಟು ತೆರಿಗೆ ಪಾಲು ಪಡೆಯುತ್ತಿವೆ. ಸತತವಾಗಿ ಅತ್ಯಧಿಕ ಪಾಲನ್ನು ಪಡೆದಂತಹ ರಾಜ್ಯಗಳು ಅಗತ್ಯ ಆರ್ಥಿಕ ಬೆಳವಣಿಗೆ ತೋರಿಸದೆ ಇದ್ದಾಗ ಗಂಭೀರ ಮರುಚಿಂತನೆ ಅಗತ್ಯವಿದೆ. 

ಅರ್ಥಶಾಸ್ತ್ರಜ್ಞ ಅರವಿಂದ್ ಪನಗಾರಿಯ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗಕ್ಕೆ ಐದು ವರ್ಷಗಳ ಅವಧಿಗೆ ವಿಭಿನ್ನ ರಾಜ್ಯಗಳು ಮತ್ತು ಕೇಂದ್ರಗಳಿಗೆ ತೆರಿಗೆ ಪಾಲನ್ನು ಹಂಚುವ ಹೊಣೆಯನ್ನು ನೀಡಲಾಗಿದೆ. ಆಯೋಗದ ಶಿಫಾರಸು 2026ರಿಂದ ಏಪ್ರಿಲ್ 1ರಿಂದ ಅನ್ವಯವಾಗಲಿದೆ. ಹೀಗಾಗಿ ಇದೀಗ ಅರ್ಹತಾ ಮಾನದಂಡವನ್ನು ಬದಲಿಸುವ ಹೊಣೆಗಾರಿಕೆಯನ್ನು 16ನೇ ಹಣಕಾಸು ಆಯೋಗ ನಿಭಾಯಿಸಬೇಕಿದೆ. 

ಕೆಲವು ವಿಶ್ಲೇಷಕರು ಸೂಚಿಸಿದಂತೆ ವಿಶ್ವಸಂಸ್ಥೆಯ ಗುರಿಗಳನ್ನು ಸಾಧಿಸುವ ಪ್ರಗತಿಪರ ಆರ್ಥಿಕ ಚಟುವಟಿಕೆಗೆ ಉತ್ತೇಜಕಗಳನ್ನು ನೀಡಿ ತೆರಿಗೆ ಪಾಲನ್ನು ರಾಜ್ಯಗಳಿಗೆ ಹಂಚಬೇಕು. ಇಂತಹ ಅರ್ಹತಾ ಮಾನದಂಡ ಬದಲಿಸಿದ ವಿಧಾನದಲ್ಲಿ ದಕ್ಷಿಣದ ರಾಜ್ಯಗಳೇ ಲಾಭ ಪಡೆಯಲಿವೆ ಎನ್ನುವ ಚರ್ಚೆಯೂ ತಪ್ಪು. ಗುಜರಾತ್ ಮತ್ತು ಒಡಿಶಾದಂತಹ ಉತ್ತರದ ರಾಜ್ಯಗಳು 2012-2022ರ ನಡುವೆ ಅತ್ಯುತ್ತಮ ಪ್ರಗತಿ ದಾಖಲಿಸಿದ್ದು, ಈ ಶೈಲಿಯ ಹಂಚಿಕೆಯ ಅತಿದೊಡ್ಡ ಪಾಲು ಪಡೆಯಲಿವೆ. 

ಅಂತಿಮವಾಗಿ ರಾಜ್ಯಗಳು ಶಾಶ್ವತವಾಗಿ ಮತ್ತೊಂದು ರಾಜ್ಯದ ಪ್ರಗತಿಯನ್ನು ಅವಲಂಬಿಸಿ ಮುಂದುವರಿಯದೆ, ಸ್ವತಃ ಪ್ರಗತಿ ಸಾಧಿಸಲು ಪ್ರಯತ್ನಿಸಲು ಒತ್ತಡ ಹೇರುವ ಅಗತ್ಯವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿರುತ್ತದೆ. ಆಡಳಿತ ಪಕ್ಷದ ಹಿತಾಸಕ್ತಿ ಗಮನಿಸಿ, ಮಿತ್ರ ಸರ್ಕಾರಗಳಿರುವ ರಾಜ್ಯಗಳಿಗೆ ಮಾತ್ರ ಬಹುಪಾಲು ನೆರವು ನೀಡುವಂತಹ ಸ್ವಾರ್ಥ ಹಿತಾಸಕ್ತಿಯ ನಿರ್ಧಾರಗಳು ದೇಶದ ಒಕ್ಕೂಟ ರಚನೆಗೆ ಹಾನಿಕರವಾಗಿ ವಿಭಜಕ ಮನೋಭಾವ ಬೆಳೆಯುವ ಸಾಧ್ಯತೆಯಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

Download Eedina App Android / iOS

X