ಬಿಹಾರ ಸಿಎಂ ನಿತೀಶ್ ಕುಮಾರ್ ಎನ್‌ಡಿಎ ಸೇರ್ಪಡೆಯ ನಂತರ ‘ಇಂಡಿಯಾ’ ಒಕ್ಕೂಟಕ್ಕೆ ಮತ್ತೊಂದು ಹಿನ್ನೆಡೆಯಾಗುವ ಸಾಧ್ಯತೆಯಿದೆ. ಇಂಡಿಯಾ ಒಕ್ಕೂಟದ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದು,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.
ನಿಕಟ ಮೂಲಗಳ ಬೆಳವಣಿಗೆಗಳ ಪ್ರಕಾರ, ಬಿಜೆಪಿಯು ಆರ್‌ಎಲ್‌ಡಿಗೆ ನಾಲ್ಕು ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆಯಿದೆ.
ಮೂಲಗಳು ಹೇಳುವಂತೆ ಬಿಜೆಪಿ ನಾಯಕರನ್ನು ಜಯಂತ್ ಚೌಧರಿ ದೆಹಲಿಯಲ್ಲಿ ಇಂದು ಭೇಟಿ ಮಾಡಿದ್ದು, ಎರಡೂ ಪಕ್ಷಗಳು ಕೆಲವೇ ತಿಂಗಳು ಬಾಕಿಯಿರುವ ಲೋಕಸಭಾ ಚುನಾವಣೆಯಲ್ಲಿ ಕೈಜೋಡಿಸಲಿವೆ ಎನ್ನುವುದು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜಯಂತ್ ಚೌಧರಿ ಕೂಡ ಇಂಡಿಯಾ ಒಕ್ಕೂಟದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಚಪ್ರೋಲಿಯಲ್ಲಿ ನಡೆಯಬೇಕಿದ್ದ ಜಯಂತ್ ಚೌಧರಿ ತಾತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ರದ್ದುಗೊಳಿಸಿದ್ದರು. ಮತ್ತೊಂದು ಊಹಾಪೋಹಗಳಂತೆ ಆರ್‌ಎಲ್‌ಡಿ ಎನ್‌ಡಿಎ ಕೂಟಕ್ಕೆ ಸೇರ್ಪಡೆಯಾದರೆ ನರೇಂದ್ರ ಮೋದಿ ಅವರು ಚೌಧರಿ ಚರಣ್ ಸಿಂಗ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
ಇತ್ತೀಚಿನ ದಿನಗಳಲ್ಲಿ ಜಯಂತ್ ಅವರು ಸಂಸತ್ತಿಗೂ ಗೈರು ಹಾಜರಾಗುತ್ತಿರುವುದು ಕೂಡ ಆಡಳಿತ ಪಕ್ಷದೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ ಎನ್ನುತ್ತಿದೆ ಮತ್ತೊಂದು ಮೂಲಗಳು.
ಇಂಡಿಯಾ ಒಕ್ಕೂಟದ ಮತ್ತೊಂದು ಪಕ್ಷವಾದ ಎಸ್‌ಪಿ ಹಾಗೂ ಆರ್‌ಎಲ್‌ಡಿ ನಡುವಿನ ಸಂಬಂಧ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಷಯವಾಗಿ ಹೆಚ್ಚಿನ ಸ್ಪಷ್ಟತೆ ಕೂಡ ಕಂಡುಬಂದಿಲ್ಲ. ಜನವರಿ 19 ರಂದು ನಡೆದ ಎರಡೂ ಪಕ್ಷಗಳ ಸಭೆಯಲ್ಲಿ ಆರ್‌ಎಲ್‌ಡಿಗೆ 7 ಕ್ಷೇತ್ರ ನೀಡಲಾಯಿತು. ಆದರೆ ಮೂರು ಕ್ಷೇತ್ರಗಳಲ್ಲಿ ಆರ್‌ಎಲ್‌ಡಿ ಪಕ್ಷದ ಚಿಹ್ನೆಯಡಿ ಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯಬೇಕು ಎಂದು ಷರತ್ತು ವಿಧಿಸಿದ ಕಾರಣ ಉಭಯ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ವ್ಯಕ್ತವಾಯಿತು.
ಒಟ್ಟು 80 ಲೋಕಸಭಾ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ 11 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದಾಗಿ ಎಸ್‌ಪಿ ಹೇಳಿದೆ. 2019ರಲ್ಲಿ ಎಸ್‌ಪಿ 65 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 5ರಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 62, ಬಿಎಸ್‌ಪಿ 10, ಅಪ್ನಾದಳ 2 ಹಾಗೂ ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.