ಬಿಜೆಪಿ ವತಿಯಿಂದ ಫೆಬ್ರವರಿ 9, 10, 11ರಂದು 3 ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಹೆಚ್. ಗೊಲ್ಲಹಳ್ಳಿ ಗ್ರಾಮದಲ್ಲಿ ‘ಗ್ರಾಮ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, “ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪೇಕ್ಷೆಯಂತೆ ‘ಗ್ರಾಮ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ” ಎಂದರು.
“ಕರ್ನಾಟಕ ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್‍ಗಳಲ್ಲಿ ಒಟ್ಟಾರೆಯಾಗಿ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ” ಎಂದು ವಿವರಿಸಿದರು.
“ನಾನು ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 454, 455ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. 2047ನೇ ಇಸವಿಗೆ ಭಾರತವು ‘ವಿಕಸಿತ ಭಾರತ’ವಾಗಿ ಪರಿವರ್ತನೆ ಹೊಂದಬೇಕು; ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕೆಂಬ ಮೋದಿ ಅವರ ಕನಸು ನನಸಾಗಲು ಗ್ರಾಮಗಳೂ ಅಭಿವೃದ್ಧಿ ಹೊಂದಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೇಸಿಗೆ ಬೇಗ ಬಂದಿದೆ; ಜೀವಜಲಕ್ಕೆ ತತ್ವಾರ ತಂದಿದೆ
“ಈ ಅಭಿಯಾನವು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ‘ಮೋದಿ ಮತ್ತೊಮ್ಮೆ’ ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕೆಂಬ ಆಶಯವನ್ನು ಹೊಂದಿ ಗೋಡೆ ಬರಹ ಬರೆಯಲಾಗುವುದು. ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ ನಡೆಯುತ್ತಿದೆ” ಎಂದು ಹೇಳಿದರು.
ರಾಜ್ಯದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದ್ರೆ, ಶರಣು ತಳ್ಳಿಕೆರೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್, ಬಿಜೆಪಿ ಮುಖಂಡರು ರುದ್ರೇಶ್ ಅವರು ಈ ಸಂದರ್ಭದಲ್ಲಿ ಇದ್ದರು.