ಕೆರಗೋಡು ಕೇಸರಿ ಧ್ವಜ ತೆರವುಗೊಳಿಸಿ, ರಾಷ್ಟ್ರಧ್ವಜ ಹಾರಿಸಿದ್ದನ್ನೇ ದಾಳವಾಗಿಟ್ಟುಕೊಂಡು ವಿವಾದ ಸೃಷ್ಠಿಸಿ, ಬಿಜೆಪಿ ಮತ್ತು ಸಂಘಪರಿವಾರ ಕರೆಕೊಟ್ಟಿದ್ದ ಫೆಬ್ರವರಿ 9ರ ಮಂಡ್ಯ ಬಂದ್ ಸಂಪೂರ್ಣ ವಿಫಲವಾಗಿದೆ.
ಬಿಜೆಪಿಗರ ಧ್ವಜ ವಿವಾದಕ್ಕೆ ಜನರು ಬೆಂಬಲ ನೀಡಲು ನಿರಾಕರಿಸಿದ್ದಾರೆ. ಮಂಡ್ಯ ನಗರದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿವೆ. ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಶಾಲಾ ಕಾಲೇಜು, ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಕೆಲ ಬಿಜೆಪಿ ಕಾರ್ಯಕರ್ತರು ಮಾತ್ರ ಸಂಘಪರಿವಾರದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಕೇಸರಿ ಶಾಲು ಧರಿಸಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಜೆಡಿಎಸ್ ಕೂಡ ಶುಕ್ರವಾರದ ಬಂದ್ ಮತ್ತು ಪ್ರತಿಭಟನೆಯಿಂದ ದೂರ ಉಳಿದಿದೆ. ಧ್ವಜ ವಿವಾದದಿಂದ ರಾಜಕೀಯ ಲಾಭವಾಗಬಹುದು ಎಂದು ಎಣಿಸಿದ್ದ ಜೆಡಿಎಸ್‌ಗೆ, ವಿವಾದವೇ ಮತ್ತಷ್ಟು ಪೆಟ್ಟು ಕೊಟ್ಟಿದೆ. ಹೀಗಾಗಿ, ಜೆಡಿಎಸ್ ದೂರು ಉಳಿದಿದೆ ಎಂದು ಹೇಳಲಾಗಿದೆ.
ಮಂಡ್ಯ ಬಂದ್‌ಗೆ ಬೆಂಬಲ ನೀಡುವಂತೆ ಸಂಘಪರಿವಾರದ ಮುಖಂಡರು ವರ್ತಕರು, ಆಟೊ ಚಾಲಕರನ್ನು ಗುರುವಾರ ಭೇಟಿ ಮಾಡಿ, ಮನವಿ ಮಾಡಿದ್ದರು. ಆದರೂ, ಯಾರೂ ಕೂಡ ಬಂದ್‌ಗೆ ಬೆಂಬಲ ನೀಡಿಲ್ಲ. ಇನ್ನು, ‘ಬಂದ್ ಬಗ್ಗೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದೇವೆ’ ಎಂದು ವರ್ತಕರ ಸಂಘ ಜಿಲ್ಲಾಅಧ್ಯಕ್ಷ ಕೆ.ಪ್ರಭಾಕರ್ ತಿಳಿಸಿದ್ದರು.
ಹೀಗಾಗಿ, ಸಂಘಪರಿವಾರ ಕರೆಕೊಟ್ಟಿದ್ದ ಮೊದಲ ಮಂಡ್ಯ ಬಂದ್ ಸಂಪೂರ್ಣ ವಿಫಲವಾಗಿದೆ. ಬಂದ್‌ಗೆ ಬೆಂಬಲ ದೊರೆಯದ ಕಾರಣ, ಸಂಘಪರಿವಾದ ಕಾರ್ಯಕರ್ತರು ಕೆರಗೋಡಿನಿಂದ ಮಂಡ್ಯಕ್ಕೆ ಬೈಕ್ ರ್‍ಯಾಲಿ ನಡೆಸಿದ್ದು, ನಗರದ ವೀರಾಂಜನೇಯ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.