ರೈತ ಹೋರಾಟದ ಮೊದಲ ಹಂತವಾಗಿ ಫೆಬ್ರವರಿ 13ರಂದು ಸುಮಾರು 200 ರೈತ ಸಂಘಟನೆಗಳು ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಹೀಗಾಗಿ ಹರಿಯಾಣ ಪೊಲೀಸ್ ಸಾರ್ವಜನಿಕರಿಗೆ ಮುಖ್ಯ ರಸ್ತೆಗಳನ್ನು ಅನಗತ್ಯವಾಗಿ ಬಳಸದಂತೆ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿದೆ.
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಹರಿಯಾಣದ ಪಂಚ್‌ಕುಲಾ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದೆಹಲಿಯ ಗಡಿ ಪ್ರದೇಶಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಒಳಗೊಂಡ ರೈತರ ಗುಂಪುಗಳು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ.
ಹರಿಯಾಣ ಹಾಗೂ ಪಂಜಾಬ್‌ನ ರೈತರನ್ನು ದೆಹಲಿ ಗಡಿಗೆ ಆಗಮಿಸುವುದನ್ನು ತಡೆಯಲು ದೆಹಲಿ ಪೊಲೀಸರು ಸಿದ್ಧತೆ ಪ್ರಾರಂಭಿಸುತ್ತಿದ್ದಾರೆ. ಗಡಿಗಳಲ್ಲಿ ದೊಡ್ಡ ಕ್ರೇನ್‌ಗಳು ಹಾಗೂ ಕಂಟೈನರ್‌ಗಳನ್ನು ಇರಿಸಲಾಗುತ್ತದೆ.
ಒಂದು ವೇಳೆ ಹರಿಯಾಣ ಮತ್ತು ಪಂಜಾಬ್‌ನ ಯಾವುದೇ ದಾರಿಯ ಮೂಲಕ ದೆಹಲಿ ಗಡಿಯನ್ನು ದಾಟಲು ಪ್ರಯತ್ನಿಸಿದರೆ, ಕ್ರೇನ್‌ಗಳು ಹಾಗೂ ಕಂಟೈನರ್‌ಗಳ ಮೂಲಕ ಗಡಿಯನ್ನು ಬಂದ್ ಮಾಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ
ಈ ಸಂದರ್ಭದಲ್ಲಿ ಪಂಜಾಬ್‌ಗೆ ಪ್ರಯಾಣಿಸುವ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಚಾರ ಪರಿಸ್ಥಿತಿಯ ಅಪ್‌ಡೇಟ್ ಪಡೆಯುತ್ತಿರಬೇಕು. ಇದಲ್ಲದೆ ಹರಿಯಾಣ ಹಾಗೂ ಪಂಜಾಬ್‌ನ ಎಲ್ಲ ಮಾರ್ಗಗಳಲ್ಲಿ ಸಂಭಾವ್ಯ ಸಂಚಾರಿ ಅಡೆತಡೆಯುಂಟಾಗುವ ಸಾಧ್ಯತೆಯಿದೆ ಎಂದು ಹರಿಯಾಣ ಪೊಲೀಸರು ಮಾರ್ಗಸೂಚಿಗಳ ಮೂಲಕ ತಿಳಿಸಿದ್ದಾರೆ.
ಪೊಲೀಸರ ಈ ಕ್ರಮಗಳ ಬಗ್ಗೆ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಪ್ರಕಟಣೆ ಬಿಡುಗಡೆಗೊಳಿಸಿದ್ದು, “ಸರ್ಕಾರ ಒಂದು ಕಡೆ ಮಾತುಕತೆಗೆ ಆಹ್ವಾನಿಸಿ ಮತ್ತೊಂದೆಡೆ ಗಡಿಗಳನ್ನು ನಿರ್ಬಂಧಿಸುವುದು, 144 ಸೆಕ್ಷನ್ ಜಾರಿ, ಇಂಟರ್‌ನೆಟ್ ಸ್ಥಗಿತಗೊಳಿಸುವ ಮೂಲಕ ಹರಿಯಾಣದಲ್ಲಿ ರೈತರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ರಚನಾತ್ಮಕ ಮಾತುಕತೆಗಳು ನಡೆಯುವುದು ಸಾಧ್ಯವಿಲ್ಲ. ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಹರಿಯಾಣದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ನಡಿಗೆ ಅಥವಾ ಟ್ರಾಕ್ಟರ್‌ಗಳ ಮೂಲಕ ನಡೆಯುವ ಮೆರವಣಿಗೆ ಹಾಗೂ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಫೆ.10ರಿಂದ ಫೆ.13ರವರೆಗೆ ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 50 ತುಕಡಿ ಅರೆಸೇನಾ ಪಡೆಗಳನ್ನೂ ನಿಯೋಜಿಸಲಾಗಿದೆ.
ಇದರ ನಡುವೆ ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾರ್ವನ್ ಸಿಂಗ್ ಪಂದೇರ್ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಶ್ ಗೋಯಲ್ ಹಾಗೂ ನಿತ್ಯಾನಂದ ರೈ ಅವರೊಂದಿಗೆ ಫೆ.12ರಂದು (ಸೋಮವಾರ) ಸಂಜೆ 5 ಗಂಟೆಗೆ ರೈತರ ಬೇಡಿಕೆ ಈಡೇರಿಸುವ ಬಗ್ಗೆ ಸಭೆ ನಡೆಸಲಿದ್ದಾರೆ.