ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡಲು ಕೇಂದ್ರ ಆರೋಗ್ಯ ಸಚಿವರು ತಂಡ ಕಳುಹಿಸುವದಾಗಿ ರಾಯಚೂರು ಮತ್ತು ಕೊಪ್ಪಳ ಸಂಸದರು ಹೇಳಿಕೊಂಡಿರುವುದು ಶುದ್ಧ ಸುಳ್ಳು, ಚುನಾವಣಾ ರಾಜಕೀಯ ತಂತ್ರವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಾರಸಮಲ್ ಸುಖಾಣ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, “ಸಂಸತ್‌ನಲ್ಲಿ ಆರೋಗ್ಯ ಸಚಿವರು ನೀಡಿದ ಹೇಳಿಕೆಯಂತೆ ಹುಬ್ಬಳ್ಳಿ ಧಾರವಾಡ ಹೆಸರು ಮಾತ್ರ ಇರುವುದು ಖಚಿತವಾಗಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿಯವರು ಜಿಲ್ಲೆಗೆ ಮತ್ತೊಂದು ವಂಚನೆ ಆಗುವ ಮುನ್ನ ಪ್ರಧಾನಿ ಮಂತ್ರಿಯವರ ಗಮನ ಸೆಳೆಯಬೇಕಿದೆ” ಎಂದರು.
“ಐಐಟಿ ಸ್ಥಾಪನೆಗೆ ಈಗಾಗಲೇ ಜಿಲ್ಲೆಗೆ ಆನ್ಯಾಯವಾಗಿದೆ. ಏಮ್ಸ್ ಮಂಜೂರಾತಿ ಬೇಕಿರುವ ವಿಮಾನ ನಿಲ್ದಾಣ, ಮಹಾನಗರ ಪಾಲಿಕೆ ವ್ಯವಸ್ಥೆ ರಾಜ್ಯ ಸರ್ಕಾರ ಮಾಡದೇ ಇರುವಾಗ ಏಮ್ಸ್ ಮಂಜೂರು ಮಾಡಿಸಲು ಮನವಿ ಕೊಟ್ಟರೆ ಸಾಲದು. ರಾಜ್ಯ ಸರ್ಕಾರ ಕೂಡಲೇ ಭೂಮಿ, ನೀರು ಸೇರಿದಂತೆ ಇತರೆ ಸೌಲಭ್ಯಗಳ ಷರತ್ತುಗಳನ್ನು ಪೂರೈಸುವಂತೆ ಪ್ರಸ್ತಾವನೆ ಸಲ್ಲಿಸಬೇಕು” ಎಂದರು.
“ಕಲಬುರಗಿ ರಾಜಕೀಯದಿಂದ ಜಿಲ್ಲೆಗೆ ನಿರಂತರ ಅನ್ಯಾಯ ಮುಂದುವರೆಯುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರು ಕಲಬುರಗಿಯಲ್ಲಿ ನಿನ್ನೆಯಷ್ಟೇ ಟ್ರೋಮಾ ಸೆಂಟರ್ ಉದ್ಘಾಟಿಸಿಕೊಂಡಿದ್ದಾರೆ. ಜಯದೇವ ಆಸ್ಪತ್ರೆ, ಟ್ರೋಮಾ ಸೆಂಟರ್, ನರ್ಸಿಂಗ್ ಕಾಲೇಜು, ಇಎಸ್‌ಐ ಆಸ್ಪತ್ರೆ, ಮಹಿಳಾ ಮತ್ತು ಮಗುವಿನ ಆಸ್ಪತ್ರೆಗಳೆಲ್ಲವೂ ಕಲಬುರಗಿಯಲ್ಲಿ ಸ್ಥಾಪಿಸಿದರೆ ಉಳಿದ ಜಿಲ್ಲೆಗಳ ಸ್ಥಿತಿಯೇನು” ಎಂದು ಪ್ರಶ್ನಿಸಿದರು.
“ವೈದ್ಯಕೀಯ ಶಿಕ್ಷಣ ಸಚಿವರು ಕೇವಲ ಝಂಡಾ, ಸಭೆಗೆ ಸೀಮಿತವಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಿದ್ದಾರೆ. ಸರ್ವರಿಗೂ ಸಮಬಾಳು, ಸಮಪಾಲು ಎಂದು ಹೇಳುವ ಮುಖ್ಯಮಂತ್ರಿಯವರು ಜಿಲ್ಲೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡಬೇಕು” ಎಂದು ಸ್ವಪಕ್ಷದ ವಿರುದ್ಧವೇ ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರೈತರ ಪರವಾಗಿ ಧ್ವನಿ ಎತ್ತಿ; ಶಾಸಕರಿಗೆ ಸಂಗಮೇಶ ಸಗರ ಆಗ್ರಹ
“ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವ ಕುರಿತು ಪ್ರತ್ಯೇಕ ದೇಶ ಸ್ಥಾಪಿಸುವ ಧ್ವನಿ ಕೇಳಿಬಂದಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಲಬುರಗಿಯಿಂದಲೂ ಅನ್ಯಾಯವಾಗುತ್ತಿದೆ. ಆ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರಲು ಕಾರಣವಾಗಿದೆ. ಜಿಲ್ಲೆಯ ಶಾಸಕರುಗಳಲ್ಲಿ ಇರುವ ಭಿನ್ನಾಭಿಪ್ರಾಯದಿಂದ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಪಕ್ಷದ ವೇದಿಕೆಗಳಲ್ಲಿಯೇ ಈ ಕುರಿತು ಚರ್ಚಿಸಲಾಗಿದೆ. ಆದರೆ ಗುಂಪುಗಾರಿಕೆಯಿಂದ ಜಿಲ್ಲೆ ಅಭಿವೃದ್ದಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಓಪೆಕ್ ಆಸ್ಪತ್ರೆ ಇದ್ದರೂ ಉಪಯೋಗ ಇಲ್ಲದಂತಾಗಿದೆ. ಬಜೆಟ್‌ನಲ್ಲಿಯೂ ಜಿಲ್ಲೆಗೆ ನ್ಯಾಯ ದೊರಕುವ ವಿಶ್ವಾಸವಿಲ್ಲ. ಅಭಿವೃದ್ಧಿ ಕೇವಲ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿಗೆ ಸೀಮಿತವಾದರೆ ಸಮಪಾಲು ದೊರೆಯಲು ಸಾಧ್ಯವಿಲ್ಲ” ಎಂದರು.
ವರದಿ : ಹಫೀಜುಲ್ಲ