ಕರ್ನಾಟಕ ಸರ್ಕಾರ ಬೆಂಗಳೂರಿನ ಪ್ರಸಿದ್ಧ ಕಬ್ಬನ್ ಪಾರ್ಕ್ ಪ್ರದೇಶದಲ್ಲಿ 10 ಮಹಡಿಯ ಕಟ್ಟಡವೊಂದನ್ನು ಮೇಲೇಳಿಸಲು ಸಿದ್ಧತೆ ನಡೆಸುತ್ತಿದೆ ಎನ್ನುವುದು ಇತ್ತೀಚೆಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈಗಿನ ಪ್ರಸ್ತಾಪದಲ್ಲಿ, ಕಬ್ಬನ್ ಪಾರ್ಕ್ ಪ್ರದೇಶದ ಪ್ರೆಸ್ ಕ್ಲಬ್ ಪಕ್ಕದಲ್ಲಿ ಹಿಂದೆ ಚುನಾವಣಾ ಆಯೋಗದ ಕಚೇರಿ ಇದ್ಧ ಜಾಗದಲ್ಲಿ ಬಹುಮಹಡಿಯ ಕಟ್ಟಡವೊಂದನ್ನು ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎನ್ನುವ ಬಗ್ಗೆ ನಾಗರಿಕರು ಮತ್ತು ಪರಿಸರ ಸಂರಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಉದ್ಯಾನವನಕ್ಕೆ ನಿತ್ಯವೂ ಭೇಟಿ ನೀಡುವವರು ಈಗಿನ ಬಹುಮಹಡಿ ಕಟ್ಟಡಕ್ಕೆ ಸರ್ಕಾರದ ಪ್ರೋತ್ಸಾಹದ ವಿರುದ್ಧ ಪ್ರತಿಭಟಿಸುತ್ತಿದ್ದು, ತಕ್ಷಣವೇ ಅಂತಹ ನಿರ್ಧಾರಕ್ಕೆ ತಡೆಯೊಡ್ಡಲು ಒತ್ತಾಯಿಸಿದ್ದಾರೆ. ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಶನ್ ವಕೀಲ ಮತ್ತು ಅಧ್ಯಕ್ಷ ಎಸ್ ಉಮೇಶ್ ಕುಮಾರ್ ನೇತೃತ್ವದಲ್ಲಿ ಕಳೆದ ಭಾನುವಾರ ಕೇಂದ್ರ ಗ್ರಂಥಾಲಯದ ಬಳಿ ಜನರು ಪ್ರತಿಭಟಿಸಿದ್ದಾರೆ. ಸೋಮವಾರವೂ ಪ್ರತಿಭಟನೆ ಮುಂದುವರಿದಿದೆ.
ಪ್ರಸ್ತಾಪಿತ ಕಟ್ಟಡದ ಜಾಗ ಕಬ್ಬನ್ ಪಾರ್ಕ್‌ನ ಪ್ರೆಸ್ ಕ್ಲಬ್‌ನ ಪಕ್ಕದಲ್ಲಿದೆ. ಈ ಜಾಗದ ಮರುಅಭಿವೃದ್ಧಿಯಾಗುವ ಅಗತ್ಯ ಹಿಂದಿನಿಂದಲೇ ಇತ್ತು. ಆದರೆ ಉದ್ಯಾನವನದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಮರುಅಭಿವೃದ್ಧಿ ಹೇಗೆ ಎನ್ನುವ ಪ್ರಶ್ನೆ ಮುಂದಿತ್ತು. ಕಬ್ಬನ್ ಪಾರ್ಕ್ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿರುವ ತೋಟಗಾರಿಕಾ ಇಲಾಖೆ ಈ ನಿಟ್ಟಿನಲ್ಲಿ ಪ್ರಮುಖ ಸಭೆ ನಡೆಸಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ತನ್ನ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಐತಿಹಾಸಿಕವಾಗಿ 1975ರ ಕರ್ನಾಟಕ ಸರ್ಕಾರ ಉದ್ಯಾನವನಗಳ ಕಾಯ್ದೆ ಜಾರಿಗೆ ಬಂದಂದಿನಿಂದ ಅಭಿವೃದ್ಧಿ ಚಟುವಟಿಕೆಗಳಿಂದ ಕಬ್ಬನ್ ಪಾರ್ಕ್ ಅನ್ನು ಹೊರಗಿಡಲಾಗಿತ್ತು. ಆದರೆ 2019ರಲ್ಲಿ ಈಗಿನ ಮರಗಳನ್ನು ಕಡಿಯದೆ ಮರುಅಭಿವೃದ್ಧಿಗೆ ಹೈಕೋರ್ಟ್ ಷರತ್ತುಬದ್ಧ ಅನುಮೋದನೆ ನೀಡಿದಾಗ ನಿರ್ಮಾಣದ ಅವಕಾಶ ತೆರೆದುಕೊಂಡಿತ್ತು.
ಆದರೆ, ಈ ಸ್ಥಳದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ ನಂತರ ಪರಿಸರವಾದಿಗಳು ಮತ್ತು ಬೆಂಗಳೂರಿಗರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
The Congress Govt’s proposal to erect a 10-storey annex in Cubbon Park is an assault on our city’s greenery. Bengaluru’s beloved lung space must be safeguarded, not suffocated by concrete monstrosities. Every Bengalurian must vehemently oppose and stop this green genocide. pic.twitter.com/jSbT6KSyv0
— P C Mohan (@PCMohanMP) February 9, 2024
ಕಬ್ಬನ್ ಪಾರ್ಕ್‌ನ ಹೃದಯಭಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ನಗರದ ಹಸಿರು ಹೊದಿಕೆಗೆ ಬೆದರಿಕೆ ಒಡ್ಡಲಿದೆ. ಮಾತ್ರವಲ್ಲ, ಜನಸಂಚಾರ ಹೆಚ್ಚಾಗಿ ವಾಹನದಟ್ಟಣೆ ಮತ್ತು ಮಾಲಿನ್ಯ ಸಮಸ್ಯೆ ಎದುರಾಗಬಹುದು. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರಿನ ಪರಿಸರಕ್ಕೆ ಹಾನಿಯಾಗುವಂತೆ ಚಟುವಟಿಕೆಗಳನ್ನು ನಡೆಸಿರುವ ಪರಿಣಾಮವನ್ನು ನಗರ ಎದುರಿಸುತ್ತಿದೆ. ಹೀಗಿರುವಾಗ ಪರಿಸರವಾದಿಗಳು ಮತ್ತು ನಾಗರಿಕರ ಕಳವಳಕ್ಕೆ ಕಾರಣವಿದೆ.
ದೆಹಲಿಯಂತಹ ಮಹಾನಗರಿಗಳಲ್ಲಿ ಮಾಲಿನ್ಯ ಸಮಸ್ಯೆಯನ್ನು ಕಣ್ಣಾರೆ ಕಂಡಿರುವ ಭಾರತ ಮತ್ತು ರಾಜ್ಯ ಸರ್ಕಾರಗಳು ಮಹಾನಗರಗಳಲ್ಲಿ ಯಾವುದೇ ಮರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಪರಿಸರದ ಕಡೆಗೆ ಅತಿಹೆಚ್ಚಿನ ಗಮನವನ್ನು ನೀಡಿ, ಅಭಿವೃದ್ಧಿಯ ಅಗತ್ಯವನ್ನು ಪರಿಗಣಿಸುವ ಅಗತ್ಯವಿದೆ.