ಔರಾದ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ವೃತ್ತ ಮರು ಪ್ರತಿಷ್ಠಾಪನೆ ವಿಚಾರದಲ್ಲಿ ಪೊಲೀಸರನ್ನು ಬಲಿಪಶು ಮಾಡುವುದು ನಿಲ್ಲಿಸಬೇಕೆಂದು ಲಿಂಗಾಯತ ಸಮಾಜ ಯುವ ಸಂಘ ಒತ್ತಾಯಿಸಿದೆ.
ಈ ಕುರಿತು ಗ್ರಾಮಸ್ಥರಾದ ಮಹಾದೇವ ತರನಾಳೆ, ಶಿವಕುಮಾರ ತರನಾಳೆ, ಸುಭಾಷ ಮಲ್ಲಪನೋರ, ರಮೇಶ ಗಾಜಲ್ಲೆ ಮನವಿ ಪತ್ರಕ್ಕೆ ಸಹಿ ಹಾಕಿದ ಹಕ್ಕೊತ್ತಾಯ ಪತ್ರವನ್ನು ಲಿಂಗಾಯತ ಸಮಾಜ ಯುವ ಸಂಘದ ತಾಲೂಕಾಧ್ಯಕ್ಷ ವಿರೇಶ ಅಲಮಾಜೆ ನೇತ್ರತ್ವದಲ್ಲಿ ಔರಾದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಬೀದರ್ -ನಾಂದೇಡ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನಲೆ ರಸ್ತೆ ಬದಿಯಲ್ಲಿ ಅಂಬೇಡ್ಕರ್ ಹಾಗೂ ಬಸವೇಶ್ವರವರ ವೃತ್ತಗಳು ತೆರವುಗೊಳಿಸಿದ್ದರು. ಕಾಮಗಾರಿ ಬಳಿಕ ಗ್ರಾಮಸ್ಥರು ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬಸವೇಶ್ವರ ವೃತ್ತಗಳು ಪುನಃ ಅದೇ ಸ್ಥಳದಲ್ಲಿ ನಿರ್ಮಿಸಿದ್ದಾರೆ. ಗ್ರಾಮಸ್ಥರು ಆ ಎರಡು ವೃತ್ತಗಳು ಕೂಡಿಸಿದ ಹಿನ್ನೆಲೆ ಪೊಲೀಸ್ ಸಿಬ್ಬಂದಿಯವರನ್ನು ಬಲಿಪಶು ಮಾಡುವ ಪ್ರಯತ್ನ ಖಂಡನೀಯ ಎಂದಿದ್ದಾರೆ.
“ಈ ಹಿಂದಿನಂತೆ ಕೌಡಗಾಂವ ಬಸ್ ನಿಲ್ದಾಣದ ಹತ್ತಿರ ಎರಡು ವೃತ್ತಗಳಿದ್ದು, ಗ್ರಾಮಸ್ಥರು ಪುನಃ ಅದೇ ರೀತಿಯಲ್ಲಿ ವೃತ್ತಗಳು ನಿರ್ಮಿಸಿರುತ್ತಾರೆ. ಪ್ರಯುಕ್ತ ಆ ಎರಡು ವೃತ್ತಗಳಿಗೆ ಅವಕಾಶ ಕಲ್ಪಿಸಿ ಕೋಮುಗಲಭೆ ಆಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಕೆಲವರು ಕೋಮುಗಲಭೆಗೆ ಪುಷ್ಠಿ ನೀಡುವಂತಹ ಕೆಲ ಪ್ರಯತ್ನಗಳು ನಡೆಸುತ್ತಿರುವುದು ದುರದೃಷ್ಟಕರ” ಎಂದರು.

“ಈ ವಿಚಾರದಲ್ಲಿ ತಾಲೂಕು ಆಡಳಿತ ಮುತುವರ್ಜಿ ವಹಿಸಿ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಅಗತ್ಯ ಕ್ರಮ ವಹಿಸಿ ಪೊಲೀಸ್ ಸಿಬ್ಬಂದಿಯವರನ್ನು ಬಲಿಪಶು ಮಾಡುತ್ತಿರುವುದು ನಿಲ್ಲಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗಡಿ ತಾಲೂಕಿನಲ್ಲೊಂದು ಕಣ್ಮನ ಸೆಳೆಯುವ ಮಾದರಿ ಅಂಗನವಾಡಿ ಕೇಂದ್ರ
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜ ಯುವ ಸಂಘದ ತಾಲೂಕಾಧ್ಯಕ್ಷ ವಿರೇಶ ಅಲ್ಮಾಜೆ ಸೇರಿದಂತೆ ಪ್ರಮುಖರಾದ ಬಾಲಾಜಿ ದಾಮಾ, ಆಕಾಶ ಯಡವೆ, ಪ್ರಶಾಂತ ಚಿದ್ರೆ, ದಿಲೀಪ ಲದ್ದೆ ಇದ್ದರು.