ದೆಹಲಿ ಚಲೋ ಪ್ರತಿಭಟನೆ ನಡೆಸಲು ಮುಂದಾಗಿರುವ ರೈತರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್(ಎಸ್‌ಸಿಬಿಎ) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.
ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ರಾಷ್ಟ್ರ ರಾಜಧಾನಿಯತ್ತ ಉತ್ತರ ಪ್ರದೇಶ, ಪಂಜಾಬ್ ಹಾಗೂ ಹರಿಯಾಣದಿಂದ ಪ್ರಯಾಣ ನಡೆಸುತ್ತಿರುವ ತಪ್ಪಿತಸ್ಥ ರೈತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಸಿಬಿಎ ಅಧ್ಯಕ್ಷ ಆದೀಶ್ ಅಗರ್‌ವಾಲಾ ಮುಖ್ಯ ನ್ಯಾಯಾಧೀಶರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಪ್ರತಿಭಟನೆಯಿಂದ ನ್ಯಾಯಲಯದ ವಿಚಾರಣೆಗಳಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕಾರಣದಿಂದ ಕಲಾಪಗಳಿಗೆ ವಕೀಲರು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಯಾವುದೇ ಪ್ರತಿಕೂಲ ಆದೇಶಗಳನ್ನು ನೀಡಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
200ಕ್ಕೂ ಹೆಚ್ಚು ರೈತ ಸಂಘಟನೆಗಳು ತಮ್ಮ ಹಲವು ಬೇಡಿಕೆಗಳಿಗಾಗಿ ದೆಹಲಿ ಚಲೋ ರೈತ ಹೋರಾಟ ನಡೆಸಲಿದ್ದಾರೆ. ಎಲ್ಲ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆ, ಪೂರ್ಣ ಸಾಲ ಮನ್ನಾ, ರೈತರಿಗೆ ಪಿಂಚಣಿ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು ರೈತರ ಬೇಡಿಕೆಗಳಾಗಿದೆ.
ರೈತರ ಪ್ರತಿಭಟನೆ ಹಿನ್ನೆಲೆ, ದೆಹಲಿ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ, ಸಭೆಗಳಿಗೆ ನಿರ್ಬಂಧಗಳನ್ನು ಹೇರಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರಾಜಧಾನಿ ಅಕ್ಕಪಕ್ಕದ ಗಡಿಗಳನ್ನು ಭದ್ರಪಡಿಸಿದ್ದಾರೆ.