ರೈತರ ದೆಹಲಿ ಚಲೋ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಅನ್ನದಾತರನ್ನು ಜೈಲಿಗೆ ಹಾಕುವುದು ತಪ್ಪು ಎಂದು ಹೇಳಿದೆ. ದೆಹಲಿಯ ಬವಾನಾ ಕ್ರೀಡಾಂಗಣವನ್ನು ಜೈಲಾಗಿ ಪ್ರಸ್ತಾಪಿಸುವ ಕೇಂದ್ರದ ಪ್ರಸ್ತಾವನೆಯನ್ನು ಎಎಪಿ ಸರ್ಕಾರ ತಿರಸ್ಕರಿಸಿದೆ.
ಸೋಮವಾರ ಕೇಂದ್ರವು ದೆಹಲಿ ಚಲೋ ಹಮ್ಮಿಕೊಳ್ಳುತ್ತಿರುವ ಪ್ರತಿಭಟನಾನಿರತ ರೈತರನ್ನು ಬಂಧಿಸುವುದಕ್ಕೆ ಬವಾನಿ ಕ್ರೀಡಾಂಗಣವನ್ನು ತಾತ್ಕಾಲಿಕವಾಗಿ ಜೈಲಾಗಿ ಪರಿವರ್ತಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ದೆಹಲಿಯ ಗೃಹ ಸಚಿವ ಕೈಲಾಶ್ ಗೆಹ್ಲೋಟ್, ರೈತರ ಬೇಡಿಕೆಗಳು ಸತ್ಯವಾಗಿದೆ. ಅಲ್ಲದೆ ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೆ ಪ್ರತಿಯೊಬ್ಬ ಪ್ರಜೆಗೂ ಸಾಂವಿಧಾನಿಕ ಹಕ್ಕಿದೆ. ಈ ಹಿನ್ನೆಲೆಯಲ್ಲಿ ರೈತರನ್ನು ಜೈಲಿಗೆ ಹಾಕುವುದು ತಪ್ಪು. ಕೇಂದ್ರ ಸರ್ಕಾರವು ರೈತರನ್ನು ಮಾತುಕತೆಗೆ ಕರೆದು ಅವರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ರೈತರು ನಮ್ಮ ದೇಶದ ಅನ್ನದಾತರು. ಅವರನ್ನು ಬಂಧಿಸಿ ಗಾಯದ ಮೇಲೆ ಮತ್ತಷ್ಟು ಬರೆ ಎಳೆಯಬಾರದು. ಕೇಂದ್ರದ ನಿರ್ಧಾರವನ್ನು ನಾವು ತಿರಸ್ಕರಿಸುತ್ತೇವೆ. ನಾವು ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಈ ನಡುವೆ ದೆಹಲಿಯಲ್ಲಿ ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಬಹುವಿಧದ ಬ್ಯಾರಿಕೇಡ್‌ಗಳು, ಸಿಮೆಂಟ್ ಬ್ಲಾಕ್‌ಗಳು, ಉಕ್ಕಿನ ಚೂಪುಗತ್ತಿಗಳು ಹಾಗೂ ಕಂಟೈನರ್ಗಳ ಗೋಡೆಯನ್ನು ಅಳವಡಿಸಲಾಗಿದೆ. ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ಪ್ರಮುಖ ಗಡಿ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇದಲ್ಲದೆ ತಾತ್ಕಾಲಿಕ ಜೈಲುಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.