ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಶಾಸಕ ಕೆ.ಗೋಪಾಲಯ್ಯ ಅವರು ದೂರು ನೀಡಿದ್ದಾರೆ. ”ಮಂಗಳವಾರ ರಾತ್ರಿ 11 ಗಂಟೆಗೆ 9632555537 ಮೊಬೈಲ್ ಮುಖಾಂತರ ಪದ್ಮರಾಜು ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ಹಣ ಕೊಡಬೇಕು, ಕೊಡದಿದ್ದರೆ ನಿಮ್ಮನ್ನೂ ನಿಮ್ಮ ಕುಟುಂಬವನ್ನು ಕೊಲ್ಲದೆ ಬಿಡುವುದಿಲ್ಲ. ವಿಧಾನಸೌಧಕ್ಕೆ ಹೋಗುವಾಗ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ” ಎಂದು ದೂರು ನೀಡಿದ್ದಾರೆ.
”ಪದ್ಮರಾಜು ಇದಕ್ಕೂ ಮೊದಲು ಬೇರೆ ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರಿಗೆ ದೂರು ನೀಡುತ್ತೇನೆ. ಪದ್ಮರಾಜುವನ್ನು ಗಡಿಪಾರು ಮಾಡುವಂತೆ ಆಗ್ರಹಿಸುತ್ತೇನೆ. ಪದ್ಮರಾಜು ಮಗಳಿಗೆ ನಾನೇ ಕೆಲಸ ಕೊಡಿಸಿದ್ದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಆಡುವ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಕೆಟ್ಟ ಪದಗಳಿಂದ ನಿಂದಿಸಿದ್ದಾನೆ” ಎಂದು ಗೋಪಾಲಯ್ಯ ಹೇಳಿದ್ದಾರೆ. ವಿಧಾನಸಭೆ ಸ್ಪೀಕರ್ಗೆ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ಗೂ ಶಾಸಕ ಕೆ.ಗೋಪಾಲಯ್ಯ ದೂರು ನೀಡಿದ್ದಾರೆ.
“ಬಸವೇಶ್ವರ ನಗರದ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೆ ಹೋದರೆ ಮನೆಯವರೂ ಸೇರಿ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಸಿದ್ದಾನೆ. ಅತ್ಯಂತ ಕೆಟ್ಟ ಪದಗಳಿಂದ ನನಗೆ ನನ್ನ ಕುಟುಂಬದವರಿಗೆ ನಿಂದನೆ ಮಾಡಿದ್ದಾನೆ. ಗೂಂಡಾ ವರ್ತನೆ ತೋರಿದ್ದಾನೆ” ಎಂದು ಘಟನೆಯ ಬಗ್ಗೆ ಗೋಪಾಲಯ್ಯ ವಿವರಣೆ ನೀಡಿದ್ದಾರೆ.
“ಪದ್ಮರಾಜ್‌ಗೂ ನನಗೂ ಯಾವುದೇ ಹಣಕಾಸಿನ ವ್ಯವಹಾರಗಳಿಲ್ಲ. ನಾನೇ ಅವನಿಗೆ ಹಿಂದೆ ಸಾಕಷ್ಟು ಸಹಾಯ ಮಾಡಿದ್ದೇನೆ. ಅವನ ಮಗಳಿಗೆ ಕಾಲೇಜು ಸೀಟು, ಉದ್ಯೋಗಕ್ಕೆ ಸಹಾಯ ಮಾಡಿದ್ದೇನೆ. ಆದರೆ, ಈಗ ಅವನೇ ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಅವನನ್ನು ಬಿಡಬಾರದು. ಸೂಕ್ತ ಕ್ರಮ ಕೈಗೊಳ್ಳಬೇಕು. ನನಗೆ ನನ್ನ ಕುಟುಂಬಕ್ಕೆ ಇನ್ನು ಮುಂದೆ ಯಾವುದೇ ರೀತಿಯ ಹಾನಿ ಅಥವಾ ತೊಂದರೆ ಉಂಟಾದರೆ ಪದ್ಮರಾಜು ಕಾರಣರಾಗಿರುತ್ತಾರೆ. ಈ ಸಂಬಂಧ ನಾನು ಫೆ.13 ರಂದು ರಾತ್ರಿ 11.30 ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ” ಎಂದು ಗೋಪಾಲಯ್ಯ ಹೇಳಿದ್ದಾರೆ.
ಇದೀಗ ಪೊಲೀಸರು ಗೋಪಾಲಯ್ಯ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆಗೆ ಮೆಮು ರೈಲು ರವಾನೆ; ಕೋಲಾರ ಜನರ ಪರದಾಟ
ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಪದ್ಮರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪದ್ಮರಾಜ್ ಹಾಗೂ ಅವರ ಬಳಿ ಇದ್ದ ಮೊಬೈಲ್ ಅನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ನಡೆಯುತ್ತಿರುವ ಕಾರಣ ಸ್ಪೀಕರ್ ವ್ಯಾಪ್ತಿಯೊಳಗೆ ವಿಧಾನಸಭೆ ಸದಸ್ಯರು ಬರುತ್ತಾರೆ. ಈ ಹಿನ್ನಲೆಯಲ್ಲಿ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಗೋಪಾಲಯ್ಯ ಅವರು ಸ್ಪೀಕರ್ ಯು.ಟಿ ಖಾದರ್ ಅವರಲ್ಲಿ ಮನವಿ ಮಾಡಿದ್ದಾರೆ.
ಮಾಜಿ ಸಚಿವ ಕೆ. ಗೋಪಾಲಯ್ಯಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಪದ್ಮರಾಜ್ ವಿರುದ್ಧ ಇಂದು ಸಂಜೆಯೊಳಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸ್ಥಳೀಯ ಇನ್ ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ಸೂಚಿಸಿದ್ದಾರೆ ಎನ್ನಲಾಗಿದೆ.