ಎಂಎಸ್ಪಿ ಸೇರಿದಂತೆ ಹಲವು ಹಕ್ಕೊತ್ತಾಯಗಳ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನೆ ಮತ್ತು ಟ್ರ್ಯಾಕ್ಟರ್ ರ್ಯಾಲಿ 5ನೇ ದಿನಕ್ಕೆ ಕಾಲಿಟ್ಟಿದೆ. ರೈತರು ದೆಹಲಿಗೆ ತೆರಳದಂತೆ ತಡೆಯಲು ಕೇಂದ್ರ ಮತ್ತು ಹರಿಯಾಣ ಬಿಜೆಪಿ ಸರ್ಕಾರಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಬಿಜೆಪಿ ಸರ್ಕಾರಗಳ ವಿರುದ್ಧ ಶುಕ್ರವಾರ ಗ್ರಾಮೀಣ್ ಬಂದ್ ಮಾಡಲಾಗಿದ್ದು, ಶನಿವಾರ ಬಿಜೆಪಿ ನಾಯಕರ ನಿವಾಸದ ಎದುರು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಮುಂದಾಗಿವೆ.
ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಶನಿವಾರ ಪಂಜಾಬ್ನಲ್ಲಿ ಮೂವರು ಹಿರಿಯ ಬಿಜೆಪಿ ನಾಯಕರ ನಿವಾಸಗಳ ಎದುರು ಧರಣಿ ನಡೆಸಲಿದೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಬಿಜೆಪಿಯ ಪಂಜಾಬ್ ಘಟಕದ ಮುಖ್ಯಸ್ಥ ಸುನೀಲ್ ಜಾಖರ್ ಮತ್ತು ಬಿಜೆಪಿ ಹಿರಿಯ ನಾಯಕ ಕೇವಲ್ ಸಿಂಗ್ ಧಿಲ್ಲೋನ್ ಅವರ ಮನೆಗಳ ಹೊರಗೆ ಧರಣಿ ನಡೆಸಲಿದೆ. ಜೊತೆಗೆ, ರಾಜ್ಯದ ಟೋಲ್ ಪ್ಲಾಜಾಗಳಲ್ಲಿಯೂ ಪ್ರತಿಭಟನೆ ನಡೆಸಲು ಸಂಘಟನೆ ಮುಂದಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿದ್ದ ‘ದೆಹಲಿ ಚಲೋ’ ಅಡಿಯಲ್ಲಿ ಫೆಬ್ರವರಿ 13ರಿಂದ ಸಾವಿರಾರು ರೈತರು ದೆಹಲಿಯತ್ತ ಹೊರಟ್ಟಿದ್ದಾರೆ. ಅವರನ್ನು ತಡೆಯಲು ಹರಿಯಾಣ ಪೊಲೀಸರು ರೈತರ ಮೇಲೆ ಜಲ ಫಿರಂಗಿ, ಅಶ್ರುವಾಯು ಸಿಡಿಸಿದ್ದಾರೆ. ರಸ್ತೆಗಳಿಗೆ ಬ್ಯಾರಿಕೇಡ್ಗಳು, ಕಬ್ಬಿಣದ ದೊಡ್ಡ ಮೊಳೆಗಳು, ಸಿಮೆಂಟ್ ಬ್ಲಾಕ್ಗಳನ್ನು ಹಾಕಿದ್ದಾರೆ. ರೈತರು ಹರಿಯಾಣ ಗಡಿಯಲ್ಲಿಯೇ ಎರಡು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ದೆಹಲಿಯತ್ತ ಸಾಗಲು ಯತ್ನಿಸುತ್ತಿದ್ದಾರೆ.
ರೈತರೊಂದಿಗೆ ಕೇಂದ್ರ ಸಚಿವ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಅವರು ನಾಲ್ಕನೇ ಸುತ್ತಿನ ಮಾತುಕತೆಗೆ ಭಾನುವಾರ ಸಭೆ ನಿಗದಿ ಮಾಡಿದ್ದಾರೆ. ಈ ಹಿಂದೆ, ಫೆಬ್ರವರಿ 8, 12 ಮತ್ತು 15 ರಂದು ಸಭೆಗಳು ನಡೆದಿವೆ. ಆದರೆ, ರೈತರ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗದ ಕಾರಣ, ಸಭೆಗಳು ವಿಫಲವಾಗಿವೆ.
ಈ ಸುದ್ದಿ ಓದಿದ್ದೀರಾ?: ತೆಲಂಗಾಣದಲ್ಲಿ ಜಾತಿ ಗಣತಿ; ವಿಧಾನಸಭೆಯಲ್ಲಿ ನಿರ್ಣಯ ಮಂಡನೆ
ಹರಿಯಾಣದ ಶಂಭು ಗಡಿಯಲ್ಲಿ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 63 ವರ್ಷದ ರೈತ ಜಿಯಾನ್ ಸಿಂಗ್ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಪ್ರತಿಭಟನಾನಿರತ ರೈತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಎಂಎಸ್ಪಿಗೆ ಕಾನೂನು ಖಾತರಿಯ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರ ಹೆಚ್ಚಳಕ್ಕೆ ಕಡಿವಾಣ, ರೈತರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು, ಭೂಸ್ವಾಧೀನ ಕಾಯಿದೆ-2013ರ ಮರುಸ್ಥಾಪನೆ ಹಾಗೂ 2021ರ ಲಖೀಂಪುರ ಖೇರಿ ಹಿಂಸಾಚಾರ ಸಂತ್ರಸ್ತರಿಗೆ ‘ನ್ಯಾಯ’ ಮತ್ತು ‘ಪರಿಹಾರ’ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.