ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ಹುಂಡೈ ಕಾರು ಶೋ ರೂಮ್ ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ನಡೆದಿದೆ.
ರಾಹುಲ್ ಹುಂಡೈ ಕಾರು ಶೋ ರೂಂನಲ್ಲಿ ಆಕಸ್ಮಿಕ ಬೆಂಕಿ ಅವಘಡ ನಡೆದಿದೆ. ಕಾರು ಶೋ ರೂಂ ಸಂಪೂರ್ಣ ವಾಲ್ ಸೀಲಿಂಗ್ನಿಂದ ಮಾಡಿದ್ದಾಗಿದೆ. ಬೆಂಕಿಗೆ ಶೋರೂಂನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಜತೆಗೆ, ಶೋ ರೂಂನ ಮೇಲ್ಭಾಗ ಸೇರಿದಂತೆ ನೆಲಮಹಡಿಗೂ ಬೆಂಕಿ ಆವರಿಸಿದ್ದು, ಇದರಿಂದ ಶೋ ರೂಂನಲ್ಲಿ ಡಿಸ್‌ಪ್ಲೇಗೆಂದು ಇಟ್ಟಿದ್ದ 6 ಕಾರುಗಳಲ್ಲಿ 3 ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ. ಸರ್ವೀಸ್ಗೆ ಎಂದು ಇಟ್ಟಿದ್ದ ಕಾರುಗಳು ಹಾಗೂ ಪಕ್ಕದ ಟಾಟಾ ಶೋ ರೂಂನ ಹೊರಭಾಗದಲ್ಲಿದ್ದ ನಾಲ್ಕರಿಂದ – ಐದು ಕಾರುಗಳು ಸಹ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಭಾಗಶಃ ಹಾನಿಯಾಗಿವೆ. ಅಲ್ಲದೇ ನೆಲ ಮಾಳಿಗೆಯಲ್ಲಿ ಇಟ್ಟಿದ್ದ ಕಾರಿನ ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ.
ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆ ಶೋ ರೂಮ್‌ನಲ್ಲಿದ್ದ ಕೆಲವು ಕಾರುಗಳು ಹಾಗೂ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು, ವಿಷಯ ತಿಳಿದು ದೊಡ್ಡ ಸಂಖ್ಯೆಯ ಜನರು ಶೋರೂಂ ಬಳಿ ಜಮಾಯಿಸಿದ್ದರು.
ಅಗ್ನಿಶಾಮಕದಳದ ನಾಲ್ಕು ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಶೋ ರೂಂನಲ್ಲಿ ಎಷ್ಟು ಕಾರುಗಳು ಹಾಗೂ ಇತರ ನಷ್ಟ ಉಂಟಾಗಿವೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಕಾರು ಶೋ ರೂಂ ಮಾಲೀಕ ರಾಹುಲ್ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಸ್ಥಳಕ್ಕೆ ಶಿವಮೊಗ್ಗ ನಗರ ಡಿವೈಎಸ್ಪಿ ಸೇರಿದಂತೆ ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಶೋ ರೂಂ ಸೇಲ್ಸ್ ಮ್ಯಾನೇಜರ್ ಮಣಿಕಂಠ, “ರಾತ್ರಿ ಸುಮಾರು 8 ಗಂಟೆಗೆ ಶೋರೂಂಗೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಬಂದಿದೆ. ಆದರೆ, ಬೆಂಕಿ ಹೇಗೆ ಬಿತ್ತು ಎಂಬ ಬಗ್ಗೆ ಮಾಹಿತಿ ಇಲ್ಲ. ತನಿಖೆಯಿಂದ ಸತ್ಯ ಹೊರಬರಬೇಕಿದೆ. ಶೋ ರೂಂನಲ್ಲಿ ಡಿಸ್‌ಪ್ಲೇಗೆ ಇಟ್ಟಿದ್ದ 6 ಕಾರುಗಳ ಪೈಕಿ 3 ಕಾರು ಸುಟ್ಟು ಹೋಗಿವೆ. ಜತೆಗೆ, ಕಾರಿನ ಬಿಡಿ ಭಾಗಗಳು ಸುಟ್ಟಿವೆ. ಪಾರ್ಕಿಂಗ್ನಲ್ಲಿದ್ದ ಗ್ರಾಹಕರ ಕಾರುಗಳು ಸೇಫ್ ಆಗಿವೆ. ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಅಗ್ನಿಶಾಮಕ ದಳದವರು ನಮಗೆ ಸರಿಯಾಗಿ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡ ನಾಮಫಲಕ ಬಳಸದ 18 ಉದ್ದಿಮೆಗಳು ತಾತ್ಕಾಲಿಕ ಬಂದ್
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಜಿ.ಮಹಾಲಿಂಗಪ್ಪ, “ಶೋರೂಂಗೆ ಬೆಂಕಿ ಬಿದ್ದಿರುವ ಬಗ್ಗೆ ಸುಮಾರು 10 ಗಂಟೆಗೆ ವಿಷಯ ತಿಳಿಯಿತು. ಕೂಡಲೇ ಒಂದು ವಾಹನವನ್ನು ಕಳುಹಿಸಿಕೊಟ್ಟೇವು. ಬೆಂಕಿ ಪ್ರಮಾಣ ಹೆಚ್ಚಾದ ಕಾರಣ ಇನ್ನೊಂದು ವಾಹನವನ್ನು ಕಳುಹಿಸಿಕೊಡಲಾಯಿತು. ಮುಖ್ಯವಾಗಿ ಶೋ ರೂಂನವರು ಬೆಂಕಿ ಶಮನದ ಕುರಿತು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಇದರಿಂದಲೇ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಯಿತು” ಎಂದು ತಿಳಿಸಿದ್ದಾರೆ.