ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಜನಸಾಮಾನ್ಯರು ಸ್ಮರಿಸುವಂತಹ ನಾಯಕ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಎ.ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ದೇವರಾಜ ಅರಸು ಅವರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
“ಅರಸು ಅವರು ಹಾವನೂರು ಆಯೋಗದ ವರದಿಯನ್ನು ಜಾರಿಗೆ ತಂದು ಹಲವು ಜಾತಿಗಳಿಗೆ ರಾಜಕೀಯ ಮೀಸಲಾತಿ ಒದಗಿಸಿ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಡಿ ದೇವರಾಜ ಅರಸು ಅವರು ಸದಾ ಕಾಲಕ್ಕೂ ನೆನಪಿನಲ್ಲಿ ಉಳಿಯುವ ನಾಯಕರಾಗಿದ್ದಾರೆ. ಒಂದೇ ಒಂದು ನಿವೇಶನ ನೀಡಲು ಸಾಧ್ಯವಾಗದ ಸಂಂದರ್ಭದಲ್ಲಿ ಅರಸು ಅವರು ಬಡವರಿಗೆ ಸಾವಿರಾರು ಎಕರೆ ಭೂಮಿಯನ್ನು ವಿತರಿಸಿ, ಅವರನ್ನು ಭೂಮಾಲೀಕರನ್ನಾಗಿ ಮಾಡಿದರು” ಎಂದು ವಿಶ್ವನಾಥ್ ಸ್ಮರಿಸಿದರು.
“ದೇವರಾಜ ಅರಸು ಅವರ ಕ್ರಾಂತಿಕಾರಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದವು. 1978ರಲ್ಲಿ ನನ್ನಂತಹ ಜನರನ್ನು ಗುರುತಿಸಿ ಶಾಸಕನನ್ನಾಗಿ ಮಾಡಿದರು. ನಂತರ, 70 ಮಂದಿ ಶಾಸಕರು ಯುವಕರಿದ್ದರು. ಜತೆಗೆ ವರ್ಗವನ್ನು ಲೆಕ್ಕಿಸದೆ ಜನರಿಗೆ ಅವಕಾಶಗಳನ್ನು ನೀಡಿದ್ದರು. ಮಲ್ಲಿಕಾರ್ಜುನ ಖರ್ಗೆ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಅವರಂತಹ ನಾಯಕರು ಅರಸು ಅವರ ಮಾರ್ಗದರ್ಶನದಲ್ಲಿ ನಾಯಕರಾಗಿ ಬೆಳೆದರು” ಎಂದರು.
“ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಚಿನ್ನಪ್ಪ ರೆಡ್ಡಿ, ಟಿ ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ಆಯೋಗಗಳನ್ನು ರಚಿಸಿದರು. ವೀರಶೈವ ಮತ್ತು ಒಕ್ಕಲಿಗರಿಗೂ ಮೀಸಲಾತಿ ನೀಡಿದ್ದಾರೆ” ಎಂದರು.
ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಾತನಾಡಿ, “ನಾವು 21ನೇ ಶತಮಾನದಲ್ಲಿದ್ದು, ದೇಶವನ್ನು ಆಳುವ ನಾಯಕರು ಅರಸು ಮತ್ತು ಅವರ ಕೆಲಸವನ್ನು ನೆನಪಿಸಿಕೊಳ್ಳಬೇಕು. ದುಡಿಯುವ ಕೈಗಳಿಗೆ ಹೆಚ್ಚಿನ ಕೆಲಸ ಸಿಗಬೇಕು. ದೇಶದಲ್ಲಿ ಸ್ನೇಹಪರ ವಾತಾವರಣವನ್ನು ಸೃಷ್ಟಿಸುವ ಅವಶ್ಯಕತೆಯಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುತ್ತಿಗೆ ಧೋರಣೆ ಕೈಬಿಟ್ಟು ಸಿಎಚ್‌ಒ ನೌಕರರನ್ನು ಖಾಯಂ ಮಾಡಿ: ಆರ್ ಮಾನಸಯ್ಯ
“ದೇವರಾಜ ಅರಸು ಅವರ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಯನ್ನು ರೂಪಿಸಬೇಕು. ಕಲ್ಲಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸಲು 10 ವರ್ಷಗಳು ಬೇಕಾಯಿತು” ಎಂದು ಹೇಳಿದರು.