ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನಾನು ಎರಡನೇ ಮಗುವಿನ ತಂದೆಯಾಗಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಟ್ವೀಟ್ನಲ್ಲಿ ಮಾಹಿತಿ ನೀಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ, “ಫೆ.15ರಂದು ನಮಗೆ ಗಂಡು ಮಗು ಆಗಿದೆ. ‘ಅಕಾಯ್’ ಎಂದು ಹೆಸರಿಟ್ಟಿದ್ದೇವೆ. ತುಂಬಾ ಖುಷಿಯಿಂದ ಈ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇವೆ. ಮಗಳು ವಾಮಿಕಾಗಳಿಗೆ ಪುಟ್ಟ ಸಹೋದರ ಬಂದಿದ್ದಾನೆ. ನಿಮ್ಮೆಲ್ಲರ ಪ್ರಾರ್ಥನೆ ಇರಲಿ. ನಮ್ಮ ಖಾಸಗಿತನವನ್ನು ಗೌರವಿಸಿ. ಪ್ರೀತಿಯಿಂದ ವಿರಾಟ್ ಮತ್ತು ಅನುಷ್ಕಾ” ಎಂದು ಬರೆದು ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
— Virat Kohli (@imVkohli) February 20, 2024
ಸದ್ಯ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಟೀಮ ಹೊರಗುಳಿದಿದ್ದರು. ಆ ಬಳಿಕ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಇನ್ನುಳಿದ ಮೂರು ಟೆಸ್ಟ್ಗಳಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಇತ್ತೀಚೆಗೆ ಅಧಿಕೃತ ಹೇಳಿಕೆ ನೀಡಿತ್ತು.
ಇದನ್ನು ಓದಿದ್ದೀರಾ? ಇಂಗ್ಲೆಂಡ್ ವಿರುದ್ಧದ ಎಲ್ಲ ಟೆಸ್ಟ್ ಪಂದ್ಯಗಳಿಂದಲೂ ಹಿಂದೆ ಸರಿದ ವಿರಾಟ್ ಕೊಹ್ಲಿ: ತಂಡ ಪ್ರಕಟಿಸಿದ ಬಿಸಿಸಿಐ
ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ, “ಉಳಿದ ಮೂರು ಟೆಸ್ಟ್ಗಳಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಆಯ್ಕೆದಾರರಿಗೆ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ” ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು.
