ಕರ್ನಾಟಕ ರಾಜ್ಯದಿಂದ ಸರಿಸುಮಾರು 4 ಲಕ್ಷ ಕೋಟಿ ರೂ. ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಪಡೆಯುತ್ತಿದೆ. ಆದರೆ, ನಮ್ಮ ಮೇಲೆಯೇ ಮಲತಾಯಿ ಧೋರಣೆ ಅನುಸರಣೆ ಮಾಡುತ್ತಿದೆ. ನಮಗೆ ನ್ಯಾಯಯುತವಾಗಿ ಸಲ್ಲಬೇಕಿದ್ದ ತೆರಿಗೆಯ ಪಾಲು ದಕ್ಕದಾಗಿದೆ. ನಮ್ಮ ಪಾಲು 1.87 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಹಿರಿಯ ಪತ್ರಕರ್ತ ಟಿ ಗುರುರಾಜ್ ಹೇಳಿದ್ದಾರೆ.
ಮೈಸೂರಿನ ಚಿಕ್ಕ ಗಡಿಯಾರದ ಬಳಿ ‘ಕರ್ನಾಟಕ ಜನರಂಗ’ ವೇದಿಕೆ 48 ಗಂಟೆಗಳ ಆಹೋರಾತ್ರಿ ಧರಣಿ ನಡೆಸಿದೆ. ಧರಣಿಯ ಸಮಾರೋಪದಲ್ಲಿ ಅವರು ಮಾತನಾಡಿದರು. “ಕೇಂದ್ರ ಸರ್ಕಾರವು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಿದ್ದು, ಕರ್ನಾಟಕವನ್ನು ಕಡೆಗಣಿಸಿದೆ. ಕೇಂದ್ರದ ಈ ಧೋರಣೆ ಖಂಡಿಸಿ ಮೈಸೂರಿನಿಂದ ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಲವು ಮಜಲುಗಳಲ್ಲಿ ಹೋರಾಟ ಗಟ್ಟಿಗೊಳ್ಳಲಿದೆ” ಎಂದರು.
“ನಾವು ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಆದರೆ, ಇದುವರೆಗೆ ಒಬ್ಬರು ಸಹ ತುಟಿಕ್ ಪಿಟಿಕ್ ಅನ್ನಲಿಲ್ಲ. ಕನ್ನಡ ನೆಲ ಜಲ, ನಾಡು ನುಡಿ, ವಿಚಾರದಲ್ಲಿ ಸದಾ ತಾರತಮ್ಯ ಎಸಗುತ್ತಿದ್ದರೂ, ಸಂಸದರು ಮೌನವಾಗಿದ್ದಾರೆ. ಅವರು ಮತ್ತೆ ಮತ ಕೇಳಲು ಬರ್ತಾರೆ, ರಾಜ್ಯದ ಕತೆ ಕೇಳಲು ಬರಲ್ಲ. ಜನರ ಕಷ್ಟ ಕೇಳಲು ಬರಲ್ಲ. ನಮಗೆ ಅನ್ಯಾಯ ಆದರೂ ಬರಲ್ಲ. ಇವರೆಲ್ಲ ಇದ್ದರೂ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ರಂಗಕರ್ಮಿ ಬಸವಲಿಂಗಯ್ಯ ಮಾತನಾಡಿ, “ಕರ್ನಾಟಕದ ಪಾಲಿಗೆ ಅನ್ಯಾಯವಾದರು ಧ್ವನಿ ಎತ್ತದೆ ಮುಗುಮ್ಮಾಗಿರುವವರ ಸಂಸದರನ್ನು ನೋಡಿ ನಗ ಬೇಕು. ನಾಗರಿಕ ಶಕ್ತಿಯನ್ನು ಕೀಳು ಮಟ್ಟದ ರಾಜಕಾರಣಿಗಳಿಗೆ ತೋರಿಸಬೇಕು. ಭಾರತದ ಶ್ರೀಮಂತರು ದಿನೇ ದಿನೇ ಅತಿ ಶ್ರೀಮಂತರಾಗುತ್ತಿದ್ದಾರೆ. ಬಡವರು ಕಡು ಬಡವರಾಗಿ ಬಸವಳಿಯುತ್ತಿದ್ದಾರೆ. ಅದಾನಿ ಅಂಬಾನಿ ಪರವಾಗಿ ಮೋದಿ ಸರ್ಕಾರ ನಿಂತಿದೆ. ಅವರಿಬ್ಬರ ಶ್ರೀಮಂತಿಕೆ ಕಳೆದ 10 ವರ್ಷಗಳಲ್ಲಿ ಉಚ್ರಯಮಾನ ಸ್ಥಿತಿ ಕಂಡಿದೆ. ಬಡವರು ಕಷ್ಟ ಪಟ್ಟು ದುಡಿದು ಕಟ್ಟಿದ ತೆರಿಗೆ ಹಣವನ್ನು ಕೂಡ ರಾಜ್ಯಕ್ಕೆ ಕೊಡದೆ ವಂಚಿಸಿದೆ” ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್ ಮಾತನಾಡಿ, “ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದು ಧೈರ್ಯವಾಗಿ ತನ್ನ ಹಕ್ಕನ್ನ ಕೇಳಬೇಕೆಂದು. ಆದರೆ, ಇವತ್ತಿನ ಸರ್ವಾಧಿಕಾರಿ ಧೋರಣೆಯ ಆಡಳಿತ ವ್ಯವಸ್ಥೆಯಲ್ಲಿ ನಾಗರಿಕರು ಪ್ರಶ್ನೆ ಮಾಡುವುದೇ ತಪ್ಪು ಅನ್ನುವಂತಾಗಿದೆ. ಸಿದ್ದರಾಮಯ್ಯ ಬಡಬಗ್ಗರಿಗೆ ಉಚಿತವಾಗಿ ಅಕ್ಕಿ ನೀಡಿದರೆ, ಆದೆ ಮೋದಿಯವರು 29 ರೂಪಾಯಿಗೆ ಮಾರ್ತಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ತೆರಿಗೆ ಹಣವನ್ನು ನೀಡದೆ ಇರುವುದು ಸರ್ವಾಧಿಕಾರದ ಅತಿರೇಕ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ ವಿಜಯ್ ಕುಮಾರ್, ಇತಿಹಾಸ ತಜ್ಞ ನಂಜರಾಜೆ ಅರಸ್, ಜನಮನ ಗೋಪಾಲ್, ಉಗ್ರನರಸಿಂಹೆ ಗೌಡ, ಜಗದೀಶ್ ಸೂರ್ಯ, ಅಸಾದುಲ್ಲ,
ಸವಿತಾ ಮಲ್ಲೇಶ್ ಸೇರಿದಂತೆ ಹಲವು ಗಣ್ಯರು ಇದ್ದರು.
ಕೆಜಿ ಅಕ್ಕಿಗೆ ೩೫ ರೂಗಳಂತೆ ಅಯ್ದು ಕೆಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ.
ಕೆಜಿಗೆ೨೯ ರುಪಾಯಿಯಂತೆ ಅಕ್ಕಿ ಪಡೆದು, ಹಣ ಉಳಿತಾಯ ಮಾಡಲಿ ಬಿಡಿ!