ಭರತ ಹುಣ್ಣಿಮೆಯ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಸೊರಬ ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಸೇರಿದಂತೆ ವಿವಿಧ ಜಿಲ್ಲೆಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯನ್ನು ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು. ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಿದರು.
ದೇವರಿಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದ ಭಕ್ತರು, ಪಡ್ಲಿಗೆ ತುಂಬಿಸುವುದು, ಮುಡಿ ನೀಡುವುದು, ಕಿವಿ ಚುಚ್ಚಿಸುವುದು, ವಿವಿಧ ಸೇವೆ ಹರಕೆಗಳನ್ನು ದೇವರಿಗೆ ಸಲ್ಲಿಸಿದರು. ದೇವಸ್ಥಾನದ ಬಳಿ ಒಲೆ ಹೂಡಿ ಕರಿದ ಹೋಳಿಗೆ, ರೊಟ್ಟಿ, ಬುತ್ತಿ ತಯಾರಿಸಿ ರೇಣುಕಾಂಬೆಗೆ ನ್ಯೆವೇದ್ಯ ಅರ್ಪಿಸಿ, ಸಾಮೂಹಿಕ ಭೋಜನ ಮಾಡಿದರು.
ಸಂಜೆ ವೇಳೆಗೆ ದೇವಸ್ಥಾನದಲ್ಲಿ ಶ್ರೀದೇವಿಯ ಪಲ್ಲಕ್ಕಿ ಉತ್ಸವ, ಮಂಗಳಾರತಿ ಕಟ್ಟೆ, ರಥ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ರಥ ಬೀದಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು. ಪೊಲೀಸರು ದೇವಸ್ಥಾನದ ಬಳಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.