ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಕುರಿತು ಚುನಾವಣಾ ಆಯೋಗಕ್ಕಿಂತ ಹೆಚ್ಚಾಗಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕಾಗಿರುವುದು ‘ತೀರಾ ನಾಚಿಕೆಗೇಡಿನ ಸಂಗತಿ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ‘ಐಡಿಯಾಸ್ ಆಫ್ ಇಂಡಿಯಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಜಮ್ಮು ಮತ್ತು ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ 370ನೇ ವಿಧಿಯ ರದ್ದತಿ ಮೂಲವಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಹಿಂದೆ ಭಯೋತ್ಪಾದನೆ ಮುಕ್ತವಾಗಿದ್ದ ಪ್ರದೇಶಗಳಲ್ಲಿ, ವಿಶೇಷವಾಗಿ ಜಮ್ಮು, ರಜೌರಿ ಮತ್ತು ಪೂಂಚ್ ಬೆಟ್ಟಗಳಲ್ಲಿ ಈಗ ಭಯೋತ್ಪಾದಕ ದಾಳಿಗಳು ವರದಿಯಾಗುತ್ತಿವೆ” ಎಂದು ಹೇಳಿದರು.
“ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಭಯೋತ್ಪಾದಕ ದಾಳಿಗಳು ನಿತ್ಯ ನಡೆಯುತ್ತಿವೆ. ಆರ್ಟಿಕಲ್ 370 ರದ್ದತಿಯ ಹೊರತಾಗಿಯೂ, ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವ ಗುಂಪುಗಳು ಈಗಲೂ ಅಸ್ತಿತ್ವದಲ್ಲಿವೆ. ಹಿಂದಿನ ಸರ್ಕಾರದ ಅವಧಿಗಿಂತ ಹೆಚ್ಚು ಕಾಶ್ಮೀರಿ ಪಂಡಿತರು ಪ್ರಸ್ತುತ (ಕೇಂದ್ರ) ಸರ್ಕಾರದ ಅಡಿಯಲ್ಲಿ ಉದ್ದೇಶಿತ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ” ಎಂದು ಅವರು ತಿಳಿಸಿದರು.
“ಈ ಸರ್ಕಾರವು ಕಾಶ್ಮೀರಿ ಪಂಡಿತರಿಗೆ ಅವರ ಭದ್ರತೆಯ ಸ್ಥೈರ್ಯವನ್ನು ಹಿಂದಿರುಗಿಸಿಲ್ಲ. ಐದು ಅಥವಾ ಹತ್ತು ವರ್ಷಗಳ ಹಿಂದೆ ಕಾಶ್ಮೀರವನ್ನು ತೊರೆಯಲು ಬಯಸ್ಸಿದ್ದ ಸಂಖ್ಯೆಗಿಂತ ಇನ್ನೂ ಹೆಚ್ಚಿನ ಕಾಶ್ಮೀರಿ ಪಂಡಿತರು ಈಗ ಕಾಶ್ಮೀರ ತೊರೆಯಲು ಬಯಸುತ್ತಿದ್ದಾರೆ” ಎಂದು ಅವರು ಹೇಳಿದರು.
“2024ರ ಸೆಪ್ಟೆಂಬರ್ ಅಂತ್ಯದೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವಿನ ಬಗ್ಗೆ ಬಿಜೆಪಿ ಮತ್ತು ಭಾರತ ಸರ್ಕಾರ ಏನು ಮಾಡಲಿದೆ” ಎಂದು ಅವರು ಕೇಳಿದರು.
“ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಚುನಾವಣಾ ಆಯೋಗವು ಘೋಷಿಸುವುದಕ್ಕಿಂತ ಅಥವಾ ಭಾರತ ಸರ್ಕಾರದಿಂದ ಪ್ರೋತ್ಸಾಹಿಸುವುದಕ್ಕಿಂತ ಹೆಚ್ಚಾಗಿ ಸುಪ್ರೀಂ ಕೋರ್ಟ್‌ನಿಂದ ಘೋಷಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅಬ್ದುಲ್ಲಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಕೇಂದ್ರದ ನಿರ್ಧಾರವನ್ನು 2023ರ ಡಿಸೆಂಬರ್ 11ರಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಅಲ್ಲದೆ, 2024ರ ಸೆಪ್ಟೆಂಬರ್ 30ರೊಳಗೆ ವಿಧಾನಸಭಾ ಚುನಾವಣೆಯನ್ನು ನಡೆಸಬೇಕೆಂದು ನಿರ್ದೇಶಿಸಿತ್ತು.