ಹಿಜಾಬ್ ಒಳಗೊಂಡಂತೆ ಮಹಿಳೆಯರ ಆಯ್ಕೆಯ ಉಡುಪುಗಳನ್ನು ಗೌರವಿಸಬೇಕು ಹಾಗೂ ವ್ಯಕ್ತಿ ಧರಿಸುವ ಉಡುಪುನ ಬಗ್ಗೆ ಯಾರೂ ನಿರ್ದೆಶಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದ ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಅಲಿಘಡ ಮುಸ್ಲಿಂ ವಿವಿಯ ಮಹಿಳಾ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು.
ಸಂವಾದದ ಸಂದರ್ಭದಲ್ಲಿ ಇತ್ತಿಚಿಗೆ ಕರ್ನಾಟಕದಲ್ಲಿ ಉಂಟಾದ ಹಿಜಾಬ್ ವಿವಾದದ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿನಿ, ನೀವು ಒಂದು ವೇಳೆ ಪ್ರಧಾನಿಯಾಗಿದ್ದರೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದರು.
“ಮಹಿಳೆ ಏನು ಬೇಕೊ ಅದನ್ನು ಧರಿಸುವುದು ಅವರ ಆಯ್ಕೆ. ಅವರಿಗೆ ಅನುಮತಿಸಬೇಕು. ಇದು ನನ್ನ ಅಭಿಪ್ರಾಯ. ನೀವು ಏನು ಧರಿಸುತ್ತೀರೋ ಅದು ನಿಮ್ಮ ಜವಾಬ್ದಾರಿ. ನೀವು ಏನು ಧರಿಸುತ್ತೀರೋ ಅದು ನಿಮ್ಮ ನಿರ್ಧಾರ. ನೀವು ಏನು ಧರಿಸುತ್ತೀರೋ ಎಂಬುದನ್ನು ಬೇರೆಯವರು ನಿರ್ಧರಿಸುತ್ತಾರೆ ಎಂಬುದನ್ನು ನಾನು ಭಾವಿಸುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ಹಿಜಾಬ್ ಧರಿಸಿ ಶಾಲೆಗೆ ಹೋಗಲು ಕರ್ನಾಟಕ ಸರ್ಕಾರ ಅನುಮತಿಸಿತ್ತು. ರಾಜ್ಯ ಸರ್ಕಾರ ನೀಡಿದ ಅನುಮತಿಯು 2022ರಲ್ಲಿ ಉಂಟಾದ ಹಿಜಾಬ್ ವಿವಾದದ ಬಗ್ಗೆ ಮತ್ತೆ ಚರ್ಚೆಗೆ ಆಸ್ಪದ ನೀಡಿತ್ತು.
2022ರ ಜನವರಿಯಲ್ಲಿ ಕರ್ನಾಟಕದ ಉಡುಪಿಯ ಪಿಯುಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಏಕರೂಪ ನೀತಿಯ ಉಲ್ಲಂಘನೆಯಂದು ಕಾಲೇಜಿಗೆ ಒಳಗೆ ಬರಲು ಅನುಮತಿಸಿರಲಿಲ್ಲ. ಈ ಘಟನೆಯು ಪರ ಹಾಗೂ ವಿರೋಧದ ಬೃಹತ್ ಪ್ರತಿಭಟನೆಗೆ ಪ್ರಚೋದಿಸಿತ್ತು.
ಅಂದಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಕೂಡ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ರಾಜ್ಯ ಹೈಕೋರ್ಟ್ ನಿಷೇಧವನ್ನು ಎತ್ತಿ ಹಿಡಿದಿದ್ದರೆ, ಸುಪ್ರೀಂ ಕೋರ್ಟ್ ಎರಡು ರೀತಿಯ ಭಿನ್ನ ತೀರ್ಪು ನೀಡಿತ್ತು. ಒಬ್ಬರು ನ್ಯಾಯಾಧೀಶರು ಪರವಾಗಿ ತೀರ್ಪು ನೀಡಿದರೆ, ಮತ್ತೊಬ್ಬರು ವಿರೋಧ ವ್ಯಕ್ತಪಡಿಸಿದ್ದರು.
