ಅರೆಸೇನಾ ಪಡೆ ಮತ್ತು ರಾಜ್ಯ ಪೊಲೀಸ್ ಬೆಂಗಾವಲೊಂದಿಗೆ ಕಾಂಗ್ರೆಸ್‌ನ ಐದರಿಂದ ಆರು ಶಾಸಕರನ್ನು ಹರಿಯಾಣಕ್ಕೆ ಕರೆದೊಯ್ಯಲಾಗಿದೆ ಎಂದು ಹಿಮಾಚಲ ಪದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಆರೋಪಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದ ನಂತರ ಸುಖು ಅವರು ಈ ಹೇಳಿಕೆ ನೀಡಿದ್ದಾರೆ.
ಫೆ.29ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದ್ದು, ಈ ಕಾರಣದಿಂದಲೇ ಆರು ಕಾಂಗ್ರೆಸ್ ಹಾಗೂ ಮೂವರು ಪಕ್ಷೇತರ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. 68 ಸದಸ್ಯಬಲದ ಹಿಮಾಚಲ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 40 ಶಾಸಕರಿದ್ದು, ಇಲ್ಲಿನ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸುಲಭವಾಗಿ ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯಕ್ಕೆ ಕರೆದೊಯ್ಯಲಾಗಿದ್ದು, ಕಮಲ ಪಕ್ಷವು ಅವಿಶ್ವಾಸ ಮತ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ನಂಬಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ 25 ಶಾಸಕರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
“ರಾಜ್ಯಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಆದರೆ ಬಿಜೆಪಿ ನಾಯಕರು ಮತ ಎಣಿಕೆ ಅಧಿಕಾರಿಗಳನ್ನು ಬೆದರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಅವರು ಬಹಳ ಸಮಯದಿಂದ ಮತದಾನವನ್ನು ನಿಲ್ಲಿಸಿದ್ದಾರೆ. ಸಂಯಮದಿಂದ ವರ್ತಿಸಿ ಜನರ ಮೇಲೆ ಒತ್ತಡ ತರಬೇಡಿ ಎಂದು ನಾನು ಬಿಜೆಪಿ ನಾಯಕರಲ್ಲಿ ಮನವಿ ಮಾಡುತ್ತೇನೆ” ಎಂದು ಎಕ್ಸ್‌ನಲ್ಲಿ ಸಿಎಂ ಸುಖು ತಿಳಿಸಿದ್ದಾರೆ.
“ಅರೆಸೇನಾ ಪಡೆ ಮತ್ತು ರಾಜ್ಯ ಪೊಲೀಸ್ ಬೆಂಗಾವಲೊಂದಿಗೆ ಕಾಂಗ್ರೆಸ್‌ನ ಐದರಿಂದ ಆರು ಶಾಸಕರನ್ನು ಹರಿಯಾಣಕ್ಕೆ ಕರೆದೊಯ್ಯಲಾಗಿದೆ. ಶಾಸಕರ ಕುಟುಂಬದವರು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಶಾಸಕರು ಅವರನ್ನು ಸಂಪರ್ಕಿಸಬೇಕು. ಆತಂಕಪಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಪಕ್ಷ ಹಾಗೂ ಸರ್ಕಾರವಿದೆ. ಆದರೆ ವಿಪಕ್ಷದಿಂದ ಈ ರೀತಿ ನಡೆಯುವ ಗೂಂಡಾಗಿರಿಯನ್ನು ಹಿಮಾಚಲ ಪ್ರದೇಶದ ಜನತೆ ಒಪ್ಪುವುದಿಲ್ಲ” ಎಂದು ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.