ವಿಧಾನಸೌಧ ಆವರಣದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಬುಧವಾರದ ಕಲಾಪದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿತು. ಪರಿಣಾಮ ಕಲಾಪವನ್ನು ಗುರುವಾರಕ್ಕೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಮುಂದೂಡಿದರು.
ರಾಜ್ಯಸಭಾ ಚುನಾವಣೆ ನಡೆದು ಕಾಂಗ್ರೆಸ್‌ನ ಮೂವರು ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ವೇಳೆ ಕಾಂಗ್ರೆಸ್‌ನ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಹೇಳಿಯನ್ನು ನಾಸಿರ್ ಹುಸೇನ್ ಬೆಂಬಲಿಗರು ಕೂಗಿದ್ದಾರೆ ಎಂದು ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸಿದವು.
ಅಷ್ಟೇ ಬೇಕಾಗಿದ್ದ ಬಿಜೆಪಿ ರಾಜಕೀಯ ಲಾಭಕ್ಕಾಗಿ ಪ್ರಕರಣಕ್ಕೆ ಜೋತು ಬಿದ್ದು, ಪ್ರತಿಭಟನೆಗೆ ಮುಂದಾಗಿದೆ. ಗುರುವಾರ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಬಿಜೆಪಿ ಹೇಳಿಕೊಂಡಿದೆ.
