ಈ ದಿನ ಸಂಪಾದಕೀಯ | ಬಿಜೆಪಿಗೆ ʼವಿವಾದದ ಸರಕುʼ ಪೂರೈಕೆಯ ಗುತ್ತಿಗೆ ಪಡೆದಿವೆಯೇ ಕನ್ನಡದ ಮಾಧ್ಯಮಗಳು?

Date:

ಬಿಜೆಪಿಯವರಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮಗಳು ಅಪಪ್ರಚಾರಕ್ಕೆ ಇಳಿಯುತ್ತಿವೆ. ಕ್ಷುಲ್ಲಕ ವಿಚಾರಗಳನ್ನು ಪ್ಯಾನಲ್‌ ಚರ್ಚೆಗೆ ಎಳೆತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ.

ಸದನದಲ್ಲಿಯೂ‌, ಹೊರಗಡೆಯೂ ಕೋಮು ವಿಚಾರವನ್ನು ಎಳೆದು ತಂದು ಪ್ರತಿಭಟನೆ ನಡೆಸುತ್ತಾ ನಗೆಪಾಟಲಿಗೀಡಾಗುತ್ತಾ ಬಂದಿರುವ ವಿರೋಧ ಪಕ್ಷ ಬಿಜೆಪಿಗೆ, ಜೆಡಿಎಸ್‌ ಬೆಂಬಲ ಸಿಕ್ಕರೂ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭವೇನೂ ಆದಂತಿಲ್ಲ. ಆದರೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಕೆಲಸ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಕಳೆದ ತಿಂಗಳು ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ವಿಚಾರವಾಗಿ ಜೆಡಿಎಸ್‌ ಬಿಜೆಪಿ ಜಂಟಿ ಪ್ರತಿಭಟನೆ ನಡೆಸಿತ್ತು. ಅದು ತಣ್ಣಗಾಗುತ್ತಿದ್ದಂತೆ ಮಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ ರಾಮನ ಅವಹೇಳನ ಮಾಡಿದರು ಎಂದು ಪುರಾವೆಯೇ ಇಲ್ಲದ ಆರೋಪಕ್ಕೆ ಎದ್ದು ನಿಂತ ಮಂಗಳೂರಿನ ಶಾಸಕರು ಅಲ್ಲಿ ಗದ್ದಲ ಎಬ್ಬಿಸಿ ಪೋಷಕರು ಮತ್ತು ಶಿಕ್ಷಕರ ಮಧ್ಯೆ ವಿಷ ಬೀಜ ಬಿತ್ತಿದ್ದರು. ಬಜೆಟ್‌ ಅಧಿವೇಶನ ಶುರುವಾದಾಗ ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದ ಅದೇ ಶಾಲೆಯ ವಿಚಾರವನ್ನು ಸದನದಲ್ಲಿ ಎಳೆದು ತಂದು ಪ್ರತಿಭಟನೆ ನಡೆಸಿ ಸದನದ ಸಮಯ ಹಾಳು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಲು ಶುರು ಮಾಡುತ್ತಿದ್ದಂತೆ ಬಜೆಟ್‌ ಅಧಿವೇಶನವನ್ನು ಬಹಿಷ್ಕರಿಸಿ ಬಿಜೆಪಿ ಸದಸ್ಯರು ಹೊರ ನಡೆದಿದ್ದರು. ಅವರು ಯಾವ ವಿಚಾರಕ್ಕೆ ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಅವರಿಗೇ ಸ್ಪಷ್ಟನೆ ಇರುತ್ತಿರಲಿಲ್ಲ. ಆದರೆ ಮಾಧ್ಯಮಗಳು ಅವರ ಬೆನ್ನಿಗೆ ನಿಂತು ಪ್ರಚಾರ ಕೊಟ್ಟವು. ಕೆರೆಗೋಡು, ಮಂಗಳೂರು ಪ್ರಕರಣಗಳಲ್ಲಿ ಮಾಧ್ಯಮಗಳು ನಡೆದುಕೊಂಡ ರೀತಿಗೆ ಜನರೇ ಉಗಿದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಾಗೆ ನೋಡಿದರೆ ಬಿಜೆಪಿಯವರಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮಗಳು ಅಪಪ್ರಚಾರಕ್ಕೆ ಇಳಿಯುತ್ತಿವೆ. ಕ್ಷುಲ್ಲಕ ವಿಚಾರಗಳನ್ನು ಪ್ಯಾನಲ್‌ ಚರ್ಚೆಗೆ ಎಳೆತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಕಾಂಗ್ರೆಸ್‌ ಪ್ರಶ್ನೆ ಮಾಡಿದರೆ ವಾಸ್ತವಾಂಶವನ್ನು ಬಿತ್ತರಿಸಬೇಕಿರುವ ಮಾಧ್ಯಮಗಳು ಬಿಜೆಪಿಯವರ ವಾದಕ್ಕೆ ಪ್ರಚಾರ ಕೊಡುತ್ತ ಸತ್ಯಾಂಶವನ್ನು ತಿಳಿಸುವ ತಮ್ಮ ಜವಾಬ್ದಾರಿಯಿಂದ ವಿಮುಖವಾಗಿವೆ.

ನಿಗದಿಯಂತೆ ಕಳೆದ ಶುಕ್ರವಾರ ಬಜೆಟ್‌ ಅಧಿವೇಶನ ಮುಗಿಯಬೇಕಿತ್ತು. ಆದರೆ, ವಿರೋಧ ಪಕ್ಷಗಳ ಗಲಾಟೆಯ ಕಾರಣದಿಂದ ಚರ್ಚೆ ಅಪೂರ್ಣವಾದ ಕಾರಣ ಮುಖ್ಯಮಂತ್ರಿಗಳಿಗೆ ಉತ್ತರಿಸಲೆಂದು ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ, ಭಾನುವಾರ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದಾಗಿ ಸೋಮವಾರ ಅಧಿವೇಶನ ನಡೆಯಲಿಲ್ಲ. ನಿಗದಿಯಂತೆ ಮಂಗಳವಾರ ರಾಜ್ಯಸಭಾ ಚುನಾವಣೆ ಇತ್ತು. ಹಾಗಾಗಿ ಬುಧವಾರಕ್ಕೆ ಮುಂದೂಡಲಾಗಿತ್ತು. ಮಂಗಳವಾರ ಸಂಜೆ ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದಿತ್ತು. ಮೈತ್ರಿಗೆ ಅಡ್ಡ ಮತದಾನದ ಅವಮಾನವೂ ಸೇರಿ ಮುಖಭಂಗವಾಗಿತ್ತು. ಕಾಂಗ್ರೆಸ್‌ ಸಂಭ್ರಮದಲ್ಲಿದ್ದಾಗಲೇ ವಿಧಾನಸೌಧದ ಪಡಸಾಲೆಯಲ್ಲಿಯೇ ಸೈಯದ್‌ ನಾಸಿರ್‌ ಹುಸೇನ್‌ ಬೆಂಬಲಿಗರು ‘ಪಾಕಿಸ್ತಾನ್‌ ಝಿಂದಾಬಾದ್‌’ ಘೋಷಣೆ ಕೂಗಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಸ್ಫೋಟಿಸಿದ್ದೇ ತಡ ಬಿಜೆಪಿ ನಾಯಕರು ತಡರಾತ್ರಿಯೇ ವಿಧಾನಸೌಧ ಪೊಲೀಸ್‌ ಠಾಣೆಯ ಮುಂದೆ ಧರಣಿ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆಯ ಮಹಾಪೂರವೇ ಹರಿಯಿತು. ಟಿವಿಗಳ ಪ್ರೈಮ್‌ ನ್ಯೂಸ್ ನಲ್ಲಿ ಘೋಷಣೆಯ ವಿಡಿಯೊ ಎಂದು ಪ್ರಸಾರ ಮಾಡಲಾಯಿತು.

“ನಾಸೀರ್‌ ಸಾಬ್‌ ಝಿಂದಾಬಾದ್‌” ಎಂಬ ಘೋಷಣೆ ಕೂಗಿರುವುದು ವಿಡಿಯೋಗಳಲ್ಲಿ ಸ್ಪಷ್ಟವಾಗಿದೆ. ಆದರೆ ಮೀಡಿಯಾಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿಯೇ ಬಿಟ್ಟಿವೆ. ಅಷ್ಟಕ್ಕೂ ಮಾಧ್ಯಮಗಳೇ ಹೇಳುವಂತೆ ಮೀಡಿಯಾಗಳಿಗೆ ಸಂದರ್ಶನ ನೀಡುತ್ತಿರುವಾಗಲೇ ಘೋಷಣೆ ಕೂಗಿದ್ದಾರೆ. ಹಾಗಿದ್ದರೆ ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಅಲ್ಲಿದ್ದ ಪೊಲೀಸರು ವಶಕ್ಕೆ ಪಡೆಯಬೇಕಿತ್ತು. ಆತನನ್ನು ಬೆನ್ನಟ್ಟಿ ವಿಡಿಯೋ ಮಾಡುವುದು ಮಾಧ್ಯಮದ ಪ್ರಳಯಾಂತಕ ವರದಿಗಾರರಿಗೆ ಕಷ್ಟವಾಗಿತ್ತೇ? ಹಾಗೆ ಮಾಡಿಲ್ಲ ಯಾಕೆ? ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಮೊದಲು ಸುದ್ದಿ ಹಬ್ಬಿಸಿದವರು ಮಾಧ್ಯಮದವರು. ಲೈವ್‌ನಲ್ಲೇ ವರದಿಗಾರರು ಸ್ಟುಡಿಯೊಗೆ ಮಾಹಿತಿ ನೀಡಿದ್ದಾರೆ. ವಿಡಿಯೊದಲ್ಲಿ ಕೇಳಿಸುತ್ತಿರುವ ಘೋಷಣೆಯನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಕೇಳಿಸಿಕೊಂಡ ಎಲ್ಲರಿಗೂ ಅಲ್ಲಿ ನಾಸಿರ್‌ ಸಾಬ್‌, ನಾಸಿರ್‌ ಹುಸೇನ್‌ ಝಿಂದಾಬಾದ್‌ ಎಂದು ಕೂಗಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.

ಆದರೆ, ಕನ್ನಡದ ಬಹುತೇಕ ದೃಶ್ಯ ಮಾಧ್ಯಮಗಳು ಮತ್ತು ಅವುಗಳ ವೆಬ್‌ ಪುಟಗಳು ಬೆಳಗಾಗುವುದರೊಳಗೆ ತೀರ್ಪು ಕೊಟ್ಟು ಬಿಟ್ಟಿದ್ದವು. ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಸೇರಿ ಒಂದು ಸುಳ್ಳನ್ನು ಕಪೋಲ ಕಲ್ಪಿತ ವರದಿಯನ್ನು ಸತ್ಯ ಮಾಡಲು ಹೆಣಗಾಡುತ್ತಿರುವುದಂತು ನಿಚ್ಚಳವಾಗಿ ಕಾಣಿಸುತ್ತಿದೆ. ಜನರೇ ಕರೆಯುವಂತೆ “ಮಾರಿಕೊಂಡ ಮಾಧ್ಯಮಗಳು” ಸುಳ್ಳು, ಕಪೋಲಕಲ್ಪಿತ ಸರಕುಗಳನ್ನು ಬಿಜೆಪಿಗರಿಗೆ ಹೇರಳವಾಗಿ ಪೂರೈಸುತ್ತಿವೆ. ವಿಧಾನಪರಿಷತ್‌ ಉಪ ಚುನಾವಣೆಯಲ್ಲೂ ಸೋಲು ಕಂಡಿದ್ದ ಮೈತ್ರಿ ಪಕ್ಷಗಳಿಗೆ ರಾಜ್ಯಸಭಾ ಚುನಾವಣೆಯಲ್ಲೂ ಮುಖಭಂಗವಾಗಿತ್ತು. ಅದು ಮರೆಯುವಂತೆ ಮಾಡುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿವೆ. ವಿವಾದದ ಸರಕನ್ನು ಬಿಜೆಪಿಗೆ ಎತ್ತಿ ಕೊಡುತ್ತಿವೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನೆಗೆಟಿವ್‌ ಸುದ್ದಿ ಪ್ರಕಟಿಸುವುದು, ಜನರಿಂದ ತಮಗೆ ಬೇಕಿರುವ ಹೇಳಿಕೆಗಳನ್ನು ಪಡೆದು ಅದನ್ನೇ ಇಡೀ ರಾಜ್ಯದ ಜನರ ಅಭಿಪ್ರಾಯ ಎಂದು ಬಿಂಬಿಸುವಲ್ಲಿಯೂ ಮಾಧ್ಯಮಗಳು ಹಿಂದೆ ಬಿದ್ದಿಲ್ಲ. ಪತ್ರಿಕಾಧರ್ಮ, ಜವಾಬ್ದಾರಿ ಎಲ್ಲವನ್ನೂ ಬಿಜೆಪಿ, ಮೋದಿ ಸರ್ಕಾರದ ಪದತಲದಲ್ಲಿಟ್ಟು ನಿತ್ಯ ಭಜನೆ ಮಾಡುತ್ತಿರುವ ಮಾಧ್ಯಮಗಳಿಂದ ಹೆಚ್ಚಿನ ನಿರೀಕ್ಷೆ ಇಲ್ಲ.

ಇಂತಹ ಹತ್ತಾರು ಪ್ರಕರಣಗಳಲ್ಲಿ ಸರ್ಕಾರವನ್ನು ಹಣಿಯುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಒಂದು ಪ್ರಕರಣದಲ್ಲಾದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಮನಸ್ಸು ಮಾಡಿದರೆ, ಹಾದಿ ತಪ್ಪಿದ ಮಾಧ್ಯಮಗಳು ದಾರಿಗೆ ಬರಬಹುದು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...

ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್‌ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?

ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ...