ನಿವೃತ್ತ ಐಎಎಸ್ ಅಧಿಕಾರಿ, ಸ್ಯಾಂಡಲ್‌ವುಡ್ ನಟ ಕೆ ಶಿವರಾಮ್ ಅವರು ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ 71 ವರ್ಷದ ನಟ ಕೆ ಶಿವರಾಮ್ ನಗರದ ಎಚ್.ಸಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೃತ್ತಿಯಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಕೆ ಶಿವರಾಮ್ ಅವರು, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗರಾಗಿ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಐಎಎಸ್ ಅಧಿಕಾರಿಯಾಗಿ, ವಿಜಯಪುರ, ಬೆಂಗಳೂರು,ಮೈಸೂರು,ಕೊಪ್ಪಳ, ದಾವಣಗೆರೆ ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗೆ ʼವಿವಾದದ ಸರಕುʼ ಪೂರೈಕೆಯ ಗುತ್ತಿಗೆ ಪಡೆದಿವೆಯೇ ಕನ್ನಡದ ಮಾಧ್ಯಮಗಳು?
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಸಾಂಗ್ಲಿಯಾನ 3ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಸಿನಿಮಾರಂಗ ಮಾತ್ರವಲ್ಲದೆ ಅವರು ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. 2013 ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಬಿಜೆಪಿಗೆ ಸೇರಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟದಲ್ಲಿ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರು.
