ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪದವಿ ಕಾಲೇಜುಗಳಲ್ಲಿ ಉದ್ಯೋಗ ಆಧಾರಿತ ಶಿಕ್ಷಣವನ್ನು ಆರಂಭಿಸುವ ಚಿಂತನೆಯನ್ನು ನಡೆಸಿದೆ. “ರಾಜ್ಯದ ಎಲ್ಲಾ ಪದವಿ ಕಾಲೇಜುಗಳನ್ನು ಉದ್ಯೋಗ ಆಧಾರಿತ ಶಿಕ್ಷಣ ನೀಡುವ ವೃತ್ತಿಪರ ಕಾಲೇಜುಗಳನ್ನಾಗಿ ಬದಲಾಯಿಸುವ ಯೋಜನೆಯನ್ನು ರೂಪಿಸುತ್ತಿದ್ದೇವೆ,” ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವದಲ್ಲಿ ಸಚಿವ ಎಂಸಿ ಸುಧಾಕರ್ ಮಾತನಾಡಿ, “ಉನ್ನತ ಶಿಕ್ಷಣದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ನಾವು ಸೆಂಟರ್ ಫಾರ್ ರಿಸರ್ಚ್ ಇನ್ ಸ್ಕೀಮ್ಸ್ ಆಂಡ್ ಪ್ರೋಗ್ರಾಮ್ಸ್ (CRISP) ಜೊತೆ ಕೈಜೋಡಿಸುತ್ತಿದ್ದೇವೆ,” ಎಂದು ಮಾಹಿತಿ ನೀಡಿದ್ದಾರೆ. CRISP ಭಾರತ ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಕೆಲಸ ಮಾಡಿದ ನಾಗರಿಕ ಸೇವಕರ ಗುಂಪಿನ ಉಪಕ್ರಮವಾಗಿದೆ.
“ನಾವು ಪದವಿ ಕಾಲೇಜುಗಳಲ್ಲಿ ಉದ್ಯೋಗ ಆಧಾರಿತ ಶಿಕ್ಷಣವನ್ನು ಆರಂಭಿಸುವ ಗುರಿಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ವೃತ್ತಿಪರವಲ್ಲದ ಕಾಲೇಜುಗಳನ್ನು ವೃತ್ತಿಪರ ಕಾಲೇಜುಗಳಾಗಿ ಪರಿವರ್ತಿಸುವ ಚಿಂತನೆಯಿದೆ. ಹಾಗೆಯೇ 11,000 ರೂಪಾಯಿಯಿಂದ 17,000 ರೂಪಾಯಿ ಸ್ಟೈಫಂಡ್‌ನೊಂದಿಗೆ ನಾವು ಎರಡು ವರ್ಷಗಳ ಪದವಿ ಹೊಂದಿರುವವರಿಗೆ ಅಪ್ರೆಂಟಿಸ್‌ಶಿಪ್ ಎಂಬೆಡೆಡ್ ಡಿಗ್ರಿ ಪೋಗ್ರಾಮ್ ಮತ್ತು ಒಂದು ವರ್ಷ ಪದವಿಗೆ ಇಂಟರ್ನ್‌ಶಿಪ್ ಆರಂಭಿಸುವ ಯೋಜನೆ ಹೊಂದಿದ್ದೇವೆ,” ಎಂದು ಸಚಿವರು ಹೇಳಿದರು.
ರಮೇಶ್ ವಾಧ್ವಾನಿ ಫೌಂಡೇಶನ್ ಜೊತೆಗೆ ರಾಜ್ಯ ಸರ್ಕಾರವು ಕೌಶಲ್ಯ ಮತ್ತು ಉದ್ಯೋಗ-ಆಧಾರಿತ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು ಒಪ್ಪಂದವನ್ನು ಮಾಡಿಕೊಂಡಿದೆ. ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗಾಗಿ ಸ್ಪೋಕನ್ ಇಂಗ್ಲಿಷ್ ಕೋರ್ಸ್‌ಗಳಂತಹ ತರಬೇತಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.
ಇನ್ನು ಆರಂಭದಲ್ಲಿ ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಈ ವೃತ್ತಿಪರ ಶಿಕ್ಷಣ ಆರಂಭಿಸಲಾಗುತ್ತದೆ. ಅದಾದ ಬಳಿಕ ಮೈಸೂರು ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ.
ಯುವಕರಿಗೆ ಉದ್ಯೋಗವಕಾಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಸ್ತಕ್ತ ಉನ್ನತ ಶಿಕ್ಷಣದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ವಿದೇಶಿ ವಿಶ್ವವಿದ್ಯಾನಿಲಯಗಳು ಮತ್ತು ಸ್ಥಳೀಯ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.