ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳ ಆರೋಗ್ಯವನ್ನು ರಕ್ಷಿಸಬೇಕು ಎಂದು ತಹಶೀಲ್ದಾರ್ ಸೈಯದ್ ಷಾಶಾವಲಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಲು ಹಿಂಜರಿಯದೆ, ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕು. ಇದರಿಂದ ಮಕ್ಕಳಿಗೆ ಪೋಲಿಯೋ ವೈರಸ್ ವಿರುದ್ಧ ಹೋರಾಡಲು ಸಾದ್ಯವಾಗುತ್ತದೆ. ಅಂಗವಿಕಲತೆಯ ಭೀಕರ ಪರಿಣಾಮವನ್ನು ತಡೆಗಟ್ಟಲು ಸಾಧ್ಯ. ಮಾ.6ರವರೆಗೆ ಈ ಅಭಿಯಾನ ನಡೆಯಲಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಸಂತೋಷ್ ಅಲಗೂರ್ ಮಾತನಾಡಿ, “ತಾಲೂಕಿನಾದ್ಯಂತ ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನ 53,867 ಮಕ್ಕಳಿದ್ದು, ಅವರಿಗೆ ಲಸಿಕೆ ಹಾಕಲು ಒಟ್ಟು 233 ಟ್ರಾನಜಿಟ್ ಬೂತ್, 22 ಮೊಬೈಲ್ ಟೀಮ್ ರಚಿಸಲಾಗಿದೆ. ನಾಲ್ಕು ದಿನಗಳ ಲಸಿಕಾ ಪ್ರಕ್ರಿಯೆ ಇದ್ದು ಇಂದು ಬೂತ್ ಮಟ್ಟದಲ್ಲಿ ಲಸಿಕೆ ಹಾಕಲಾಗುವುದು” ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕ ಅಧಿಕಾರಿ ಆರತಿ ತುಪ್ಪದ, ಆಸ್ಪತ್ರೆಯ ಅಧಿಕಾರಿ ಡಾ.ಮುಬಾಶೇರ್, ಕಾಳಮ್ಮ ಮಠಪತಿ ಸೇರಿದಂತೆ ಸಿಬ್ಬಂದಿ ಇದ್ದರು.
