ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಪ್ರಚಾರಕ್ಕೆ ತಯಾರಿ ನಡೆಸುತ್ತಿವೆ. ಈ ನಡುವೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಅಡಿಯಲ್ಲಿರುವ ಪೆಟ್ರೋಲ್ ಪಂಪ್‌ಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ಎಂಬ ಹೋರ್ಡಿಂಗ್ ಅನ್ನು ಹಾಕಲು ಕೇಂದ್ರ ಸರ್ಕಾರ ಸೂಚನೆ ನೀಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ, ಮೋದಿ ಫೋಟೋ ಇರುವ ಅಕ್ಕಿ ಬ್ಯಾಗ್ ಖರೀದಿಗಾಗಿಯೇ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಯನ್ನು ಖರ್ಚು ಮಾಡಿದೆ. ಈಗ, ಕೇಂದ್ರ ಬಿಜೆಪಿ ಸರ್ಕಾರ ಹೋರ್ಡಿಂಗ್‌ಗಾಗಿ ಕೋಟ್ಯಾಂತರ ರೂಪಾಯಿ ಹೊರೆಯನ್ನು ಸರ್ಕಾರದ ತೈಲ ಕಂಪನಿಗಳ ಮೇಲೆ ಹೊರೆಸಿದೆ.
ಈ ಹೋರ್ಡಿಂಗ್‌ನಲ್ಲಿ ಪ್ರಧಾನಿ ಮೋದಿಯ ಚಿತ್ರವಿದ್ದು, ಪಿಎಂ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ನೀಡುವ ಚಿತ್ರವಿದೆ. ಬುಧವಾರ ಸಂಜೆಯ ಒಳಗಾಗಿ ಎಲ್ಲ ಕಡೆ ಹೊಸ ಹೋರ್ಡಿಂಗ್ ಹಾಕಲು ಪೆಟ್ರೋಲ್ ಬಂಕ್‌ಗಳು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಕೂಡಾ ಕೇಂದ್ರ ಮನವಿ ಮಾಡಿದೆ. ಈಗಾಗಲೇ, ಹಲವೆಡೆ ಪೆಟ್ರೋಲ್ ಪಂಪ್‌ಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ಹೋರ್ಡಿಂಗ್ ಹಾಕಲಾಗುತ್ತಿದೆ ಎಂದು ವರದಿಯಾಗಿದೆ.
ಹೋರ್ಡಿಂಗ್ ಅಳವಡಿಸುವವರು ಬರದಿದ್ದರೆ ಆಯಾ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ಪೆಟ್ರೋಲ್ ಪಂಪ್‌ನ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಒಟ್ಟಿನಲ್ಲಿ ಎರಡೇ ದಿನದೊಳಗೆ ಹೋರ್ಡಿಂಗ್ ಹಾಕಲು ತಿಳಿಸಲಾಗಿದೆ. ಇನ್ನು ಕೇಂದ್ರ ತೈಲ ಸಚಿವಾಲಯದ ಸೂಚನೆ ಇದಾಗಿದೆ ಎಂದು ಕೂಡಾ ವರದಿಯಾಗಿದೆ.
ಕೇಂದ್ರ ಸರ್ಕಾರದ ಈ ಸೂಚನೆಯಿಂದಾಗಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಬೊಕ್ಕಸಕ್ಕೆ ಹೊರೆ ಅಧಿಕವಾಗಲಿದೆ. ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಏಕೆಂದರೆ ದೇಶದಲ್ಲಿರುವ ಸುಮಾರು 88 ಸಾವಿರ ಪೆಟ್ರೋಲ್ ಬಂಕ್‌ಗಳ ಪೈಕಿ ಶೇಕಡ 90ರಷ್ಟು ಬಂಕ್‌ಗಳು ಈ ಮೂರು ಸಂಸ್ಥೆಗಳ ಒಡೆತನದಲ್ಲಿರುವುದು ಆಗಿದೆ.
ಆದರೆ ಲೋಕ ಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದಾಗ ಈ ಎಲ್ಲ ಹೋರ್ಡಿಂಗ್‌ಗಳನ್ನು ತೆಗೆದುಹಾಕಬೇಕಾಗುತ್ತದೆ. ಒಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಚಾರಕ್ಕಾಗಿ ಸರ್ಕಾರಿ ಹಣ ವೆಚ್ಚ ಮಾಡಲಾಗುತ್ತಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದರ ಹೊರೆ ಜನ ಸಾಮಾನ್ಯರ ಮೇಲೆಯೂ ಬೀಳಲಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.