ಇಫ್ ಓನ್ಲಿ ಐ ಕುಡ್ ಹೈಬರ್ನೇಟ್ | ಕುಟುಂಬದ ಕಷ್ಟವನ್ನು ಜಗತ್ತಿನ ಜನರೆದೆಗೆ ದಾಟಿಸುವ ಮಂಗೋಲಿಯನ್ ಮೂವಿ

Date:

Advertisements
ಮಂಗೋಲಿಯಾದ ಜನ ಚಳಿಗಾಲವನ್ನು ದಾಟುವಂತೆ, ಉಲ್ಝಿ ಎಂಬ ಹುಡುಗ ತನಗೆ ಎದುರಾಗಿರುವ ಕಷ್ಟವನ್ನು ದಾಟುತ್ತಾನೆಯೇ? ಫಿಸಿಕ್ಸ್ ಕಾಂಪಿಟೇಷನ್‌ನಲ್ಲಿ ಭಾಗವಹಿಸಿ, ಫ್ರೀ ಸ್ಕಾಲರ್‌ಶಿಪ್ ಪಡೆಯುತ್ತಾನೆಯೇ? ‘ಇಫ್ ಓನ್ಲಿ ಐ ಕುಡ್ ಹೈಬರ್ನೇಟ್’ ಚಿತ್ರ ನೋಡಿ, ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಪ್ರಪಂಚದ ಯಾವ ಮೂಲೆಗೆ ಹೋದರೂ ಬಡವರು ಬಡವರೇ. ಅವರ ಕಷ್ಟ, ಕೋಟಲೆ, ಕೊರಗು, ಹಿಂಜರಿಕೆ, ಅಸಹಾಯಕತೆ ಮತ್ತು ಆಸೆ ಒಂದೇ. ಎಲ್ಲ ಕಾಲಕ್ಕೂ ಎಲ್ಲ ದೇಶದಲ್ಲೂ ಕಂಡುಬರುವಂಥದ್ದೇ.

ಇಂಥದ್ದೇ ಒಂದು ಬಡ ಕುಟುಂಬದ ಕತೆಯನ್ನು ಹೇಳುವ ಮಂಗೋಲಿಯನ್ ಮೂವಿ ‘ಇಫ್ ಓನ್ಲಿ ಐ ಕುಡ್ ಹೈಬರ್ನೇಟ್’. ಉಲಾನ್ಬತಾರ್ ನಗರದ ಹೊರವಲಯದಲ್ಲಿ ವಾಸವಿರುವ ಐದು ಜನರಿರುವ ಪುಟ್ಟ ಕುಟುಂಬ. ಒಂದು ಕೋಣೆಯಷ್ಟು ಜಾಗವಿರುವ, ವೃತ್ತಾಕಾರವಾಗಿ ನಿರ್ಮಿಸಿರುವ ಸಣ್ಣ ಡೇರೆಯಂತಹ ಮನೆ. ಆ ಡೇರೆಯೊಳಗೆ ವಸ್ತುಗಳಿವೆ, ಉಪಯೋಗಕ್ಕೆ ಬರುವುದಿಲ್ಲ. ಹೆಂಡತಿ-ಮಕ್ಕಳಿದ್ದಾರೆ ಯಜಮಾನನಿಲ್ಲ. ವಿಧವೆ ಮಹಿಳೆ ಮತ್ತವಳ ನಾಲ್ಕು ಮಕ್ಕಳು. ಆ ಮಕ್ಕಳ ಹೊಟ್ಟೆಗೆ, ಬಟ್ಟೆಗೆ ಹೊಂದಿಸುವ ಜವಾಬ್ದಾರಿ ಹೊತ್ತ ಆಕೆ ಅವಿದ್ಯಾವಂತೆ, ಆದಾಯ ತರುವ ಕೆಲಸವಿಲ್ಲ. ಹೊರಗೆ ತಡೆಯಲಾರದಷ್ಟು ಚಳಿ, ಒಡಲಾಳದಲ್ಲಿ ಸಹಿಸಲಾರದಷ್ಟು ಸಂಕಟ. ಅದನ್ನು ಮರೆಯಲು ಆಕೆ ಕುಡಿತದ ಮೊರೆ ಹೋಗುತ್ತಾಳೆ.

ಇದನ್ನು ಓದಿದ್ದೀರಾ?: ʼಟೆರಸ್ಟ್ರಿಯಲ್ ವರ್ಸಸ್ʼ ಸಿನಿಮಾ: ʼಹಿಂದೂರಾಷ್ಟ್ರ ಕಟ್ಟುತ್ತೇವೆʼ ಎನ್ನುವವರಿಗೂ ಇಲ್ಲಿದೆ ಪಾಠ

Advertisements

ಮನೆಯ ಹಿರಿಮಗ ಉಲ್ಝಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಫಿಸಿಕ್ಸ್‌ನಲ್ಲಿ ಇಡೀ ಕ್ಲಾಸಿಗೇ ಮುಂದಿದ್ದಾನೆ. ಆದರೆ ಅವನ ಆಸಕ್ತಿಯ ವಿಷಯವಾದ ಫಿಸಿಕ್ಸ್ ಓದಲು ಬೇಕಾದ ಹಣಕಾಸಿನ ನೆರವಾಗಲಿ, ಪೋಷಕರ ಪ್ರೋತ್ಸಾಹವಾಗಲಿ ಇಲ್ಲ. ಅವನಿಗೆ ಸಿಕ್ಕ ಸರ್ಟಿಫಿಕೇಟ್ ಕಂಡು ಸಂಭ್ರಮಿಸುವಷ್ಟು ವಿದ್ಯಾವಂತರೂ ಅವರಲ್ಲ. ಬದಲಿಗೆ, ಕೆಲಸ ಹುಡುಕಿಕೊಂಡು ಅಮ್ಮ ಮನೆಯಿಂದ ದೂರ ಹೋಗುತ್ತಾಳೆ. ಇಬ್ಬರು ಚಿಕ್ಕ ಮಕ್ಕಳ ಜವಾಬ್ದಾರಿಯನ್ನು ಉಲ್ಝಿ ಹೆಗಲಿಗೇ ಹಾಕುತ್ತಾಳೆ.

ಓದಿನ ಜೊತೆಗೆ ಮನೆಯ ಜವಾಬ್ದಾರಿ ಹೊತ್ತ ಉಲ್ಝಿ, ಮನೆ ನಿಭಾಯಿಸಲು ಕೈಗೆ ಸಿಕ್ಕ ಕೂಲಿ ಕೆಲಸ ಮಾಡುತ್ತಾನೆ. ಹೊರಗಿನ ಚಳಿ ತಡೆದುಕೊಳ್ಳಲು ಮನೆಯೊಳಗಿನ ಅಗ್ಗಿಷ್ಟಿಕೆಗೆ ರಟ್ಟು, ಸೌದೆ, ಕಲ್ಲಿದ್ದಲು ಹೊಂದಿಸುವುದೇ ಕಷ್ಟವಾಗುತ್ತದೆ. ಇನ್ನು ಹೊಟ್ಟೆಗೆ ಹೊಂದಿಸುವುದು ಹೇಗೆ? ಸ್ಕೂಲಿಗೆ ಚಕ್ಕರ್ ಹೊಡೆದು ಮರ ಕಡಿಯುವ ಕೆಲಸಕ್ಕೆ ಹೋಗುತ್ತಾನೆ. ಇವನ ಮೇಲೆ ಭರವಸೆ ಇಟ್ಟ ಪ್ರಾಧ್ಯಾಪಕರ ಅವಕೃಪೆಗೆ ಗುರಿಯಾಗುತ್ತಾನೆ. ಸ್ನೇಹಿತರಿಂದ ದೂರ ಸರಿಯುತ್ತಾನೆ. ಅಷ್ಟಾದರೂ, ತಾನೇಕೆ ಸ್ಕೂಲಿಗೆ ಚಕ್ಕರ್ ಹೊಡೆದೆ ಎನ್ನುವುದನ್ನು ಯಾರಿಗೂ ಹೇಳುವುದಿಲ್ಲ. ಅಂತರ್ಮುಖಿಯಾಗಿದ್ದುಕೊಂಡೇ ತಂಗಿ-ತಮ್ಮರಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ಶಕ್ತಿಮೀರಿ ಶ್ರಮಿಸುತ್ತಾನೆ.

ವಯೋಸಹಜ ವಾಂಛಲ್ಯಗಳಿದ್ದರೂ, ಮೋಜು-ಮಸ್ತಿಗೆ ಸಹಪಾಠಿಗಳು ಕರೆದರೂ, ತನ್ನನ್ನು ತಾನೇ ನಿಗ್ರಹಿಸಿಕೊಳ್ಳುವ ಉಲ್ಝಿ, ಮನೆಯ ಯಜಮಾನನ ಪಾತ್ರವನ್ನು ನೀಟಾಗಿ ನಿರ್ವಹಿಸುತ್ತಾನೆ. ಅಣ್ಣನ ಕಷ್ಟಕ್ಕೆ ತಂಗಿ ಸಹಕರಿಸುವುದು, ಕಾಯಿಲೆಗೆ ತುತ್ತಾಗುವ ತಮ್ಮ ಅಣ್ಣನಲ್ಲಿ ಅಪ್ಪನನ್ನು ಕಾಣುವುದು, ಕಷ್ಟವಾದರೂ ಖುಷಿಯಾಗಿರುವಂತೆ ನಟಿಸುವುದು; ಮನೆಯ ಹತ್ತಿರವಿರುವ ವೃದ್ಧ ದಂಪತಿಗಳು ಮಕ್ಕಳ ಕಷ್ಟಕ್ಕೆ ಕರಗುವುದು, ನೆರವಿಗೆ ನಿಲ್ಲುವುದು- ನಮ್ಮ ನೆರೆಹೊರೆಯನ್ನೇ ನೆನಪಿಸುತ್ತದೆ. ಬಡವರನ್ನು ಬಡವರೇ ಆತುಕೊಳ್ಳುವುದು ಮನಸ್ಸನ್ನು ಆರ್ದ್ರಗೊಳಿಸುತ್ತದೆ.

ನಿರ್ದೇಶಕಿ ಝೋಲ್ಜಾರ್ಗಲ್ ಪುರೇವ್ದಾಶ್ ಜೊತೆ ಉಲ್ಝಿ
ನಿರ್ದೇಶಕಿ ಝೋಲ್ಜಾರ್ಗಲ್ ಪುರೇವ್ದಾಶ್ ಜೊತೆ ಉಲ್ಝಿ ಪಾತ್ರದಾರಿ ಬಟ್ಸೂಝ್

ಚಿತ್ರದಲ್ಲಿ ಅಮ್ಮನ ಪಾತ್ರವನ್ನು ಮದ್ಯವ್ಯಸನಿಯನ್ನಾಗಿ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಹಿಳೆಯನ್ನಾಗಿ ಚಿತ್ರಿಸಲಾಗಿದೆ. ಉಲ್ಝಿ ಎಂಬ ಹುಡುಗನ ಓದನ್ನು, ಕುಟುಂಬ ನಿರ್ವಹಣೆಯನ್ನು ಹಾಗೂ ಚಳಿಗಾಲವನ್ನು ನಿಭಾಯಿಸುವ ಸಾಮರ್ಥ್ಯವನ್ನು ಮುನ್ನೆಲೆಗೆ ತರಲಾಗಿದೆ. ಉಲ್ಝಿ ಪಾತ್ರ ನಿರ್ವಹಿಸಿರುವ ಬಟ್ಸೂಝ್‌ನ ಪಳಗಿದ ಪಾತ್ರ ನಿರ್ವಹಣೆ ಮನಸ್ಸಿಗಿಳಿಯುತ್ತದೆ. ಮಂಗೋಲಿಯಾದ ಚಳಿ ಗಾಳಿ, ಸುರಿಯುವ ಸ್ನೋ ನೋಡುಗರನ್ನು ಸ್ಪರ್ಶಿಸುತ್ತದೆ. ಮಂಗೋಲಿಯನ್‌ ಜನರ ಭಾಷೆಯಷ್ಟೇ ಬೇರೆ, ಬದುಕು ನಮ್ಮದೇ ಎನಿಸುತ್ತದೆ.

ಇಲ್ಲಿಯವರೆಗೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿರುವ, ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವ ಝೋಲ್ಜಾರ್‍ಗಲ್ ಪುರೇವ್ದಾಶ್, ಬಡ ಕುಟುಂಬದ ಕತೆಯನ್ನು ಜಗತ್ತಿನ ಜನರೆದೆಗೆ ದಾಟಿಸಿರುವ ರೀತಿ ಭಿನ್ನವಾಗಿದೆ. ಚಿತ್ರದ ಹೆಸರಾದ ʼಇಫ್ ಓನ್ಲಿ ಐ ಕುಡ್ ಹೈಬರ್ನೇಟ್‘ ಎನ್ನುವುದನ್ನು ಸಾಹಿತ್ಯಕ ಪರಿಭಾಷೆಯಲ್ಲಿ Wish I could turn into a bear ಎಂದು ಅರ್ಥೈಸಲಾಗುತ್ತದೆ. ಅದನ್ನು ನಿರ್ದೇಶಕಿ ಕಷ್ಟವನ್ನು ಚಳಿಗಾಲದೊಂದಿಗೆ ತಳುಕು ಹಾಕಿ ರೂಪಕದಂತೆ ಬಳಸಿರುವುದು- ಆಕೆಯ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ತಂತ್ರಜ್ಞರು, ನಟ-ನಟಿಯರು ಸಹಕರಿಸಿ, ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಮುಟ್ಟಿಸಿದ್ದಾರೆ. ಮಂಗೋಲಿಯಾದ ಕಷ್ಟಜೀವಿಗಳು, ಬೆಟ್ಟ ಗುಡ್ಡಗಳು, ಸುರಿಯುವ ಸ್ನೋ ಸೆರೆ ಹಿಡಿದಿರುವ ಕ್ಯಾಮರಾ, ಮತ್ತೊಂದು ಜಗತ್ತನ್ನು ಪರಿಚಯಿಸುತ್ತದೆ.

ಮಂಗೋಲಿಯಾದ ಜನ ಚಳಿಗಾಲವನ್ನು ದಾಟುವಂತೆ, ಉಲ್ಝಿ ಎಂಬ ಹುಡುಗ ತನಗೆ ಎದುರಾಗಿರುವ ಕಷ್ಟವನ್ನು ದಾಟುತ್ತಾನೆಯೇ? ಫಿಸಿಕ್ಸ್ ಕಾಂಪಿಟೇಷನ್‌ನಲ್ಲಿ ಭಾಗವಹಿಸಿ, ಫ್ರೀ ಸ್ಕಾಲರ್‌ಶಿಪ್ ಪಡೆಯುತ್ತಾನೆಯೇ? ಚಿತ್ರ ನೋಡಿ, ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X