ನನ್ನ ತಂದೆ ಬದುಕಿರುವವರೆಗೂ ಅವರು ಪಿಎಫ್ ಹಣವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಮರುಪಾವತಿ ಮಾಡಲಿಲ್ಲ. ಅವರು ಸಾವನ್ನಪ್ಪಿದ ಕೂಡಲೇ, ಹಣ ಪಾವತಿ ಮಾಡಿದ್ದಾರೆ. ಅವರು ನನ್ನ ತಂದೆಯ ಪಿಎಫ್ ಹಣ ಪಾವತಿಸಲು ಅವರ ಸಾವಿಗಾಗಿ ಕಾಯುತ್ತಿದ್ದರು ಎಂದು ಕೇರಳದಲ್ಲಿ ಇಪಿಎಫ್‌ಒ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಶವರಾಮನ್ ಅವರ ಪುತ್ರ ಪ್ರದೀಪ್ ಆರೋಪಿಸಿದ್ದಾರೆ. ತಮ್ಮ ಕುಟುಂಬಕ್ಕಾದ ಅನ್ಯಾಯ, ದೌರ್ಜನ್ಯ ಬೇರೆ ಕುಟುಂಬಗಳಿಗೆ ಆಗಬಾರದೆಂದುಇಪಿಎಫ್‌ಒ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಶಿವರಾಮನ್ ಅವರು ಅಪೋಲೋ ಟೈರ್ಸ್‌ನಲ್ಲಿ ನೌಕರರಾಗಿದ್ದರು. 9 ವರ್ಷಗಳ ಹಿಂದೆ ಅವರು ನಿವೃತ್ತರಾಗಿದ್ದರು. ಅಂದಿನಿಂದಲೂ, ತಮ್ಮ ಪಿಎಫ್ ಹಣವನ್ನು ಪಡೆಯಲು ಇಪಿಎಫ್‌ಒ ಕಚೇರಿಗೆ ಅಲೆಯುತ್ತಿದ್ದರು. ಆದರೆ, ದಾಖಲೆಗಳು ಹೋಲಿಕೆಯಾಗುತ್ತಿಲ್ಲವೆಂದು ಅಧಿಕಾರಿಗಳ ಅವರ ಹಣವನ್ನು ಪಾವತಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಮನನೊಂದಿದ್ದ ಶಿವರಾಮನ್ ಕಳೆದ ತಿಂಗಳು (ಫೆಬ್ರವರಿ) 7ರಂದು ಕೊಚ್ಚಿಯಲ್ಲಿರುವ ಇಪಿಎಫ್‌ಒ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾರೆ.
ತಮ್ಮ ತಂದೆಯ ಸಾವಿಗೆ ಇಪಿಎಫ್‌ಒ ಅಧಿಕಾರಿಗಳೇ ಕಾರಣವೆಂದು ಆರೋಪಿಸಿರುವ ಪ್ರದೀಪ್, ಫೆಬ್ರವರಿ 7ರಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಇದೀಗ, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ನಾವು ನಮ್ಮಂತೆ ಇತರ ಕುಟುಂಬಗಳಿಗೆ ನೋವು ಎದುರಾಗಬಾರದು ಎಂಬ ಕಾರಣಕ್ಕೆ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಪ್ರದೀಪ್ ಹೇಳಿದ್ದಾರೆ.
“ಇಪಿಎಫ್‌ಒ ಅಧಿಕಾರಿಗಳು ದಾಖಲೆಗಳ ಸಮಸ್ಯೆಗಳನ್ನು ಉಲ್ಲೇಖಿಸಿ 9 ವರ್ಷಗಳಿಂದ ನನ್ನ ತಂದೆಯನ್ನು ಸತಾಯಿಸಿದರು. ಹಣ ಮರುಪಾವತಿಸಲು ನಿರಾಕರಿಸಿದ್ದರು. ಆದರೆ, ಅವರು ಸಾವನ್ನಪ್ಪಿದ ಬಳಿಕ, ನಾವು ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸದೇ ಇದ್ದರೂ, ಈಗ ತಂದೆಯ ಪಿಎಫ್ ಹಣ ಪಾವತಿಸಿದ್ದಾರೆ. ವಿಪರ್ಯಾಸವೆಂದರೆ, ಅಧಿಕಾರಿಗಳು ನಮ್ಮ ತಂದೆಯ ಮರಣ ಪ್ರಮಾಣಪತ್ರವನ್ನೂ ಸಹ ಕೇಳಿಲ್ಲ” ಎಂದು ಪ್ರದೀಪ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ನ್ಯಾಯಾಲಯಗಳಲ್ಲಿ ಪೂಜೆ-ಪುನಸ್ಕಾರ ನಿಲ್ಲಿಸಿ; ಸಂವಿಧಾನಕ್ಕೆ ತಲೆಬಾಗಿ: ನ್ಯಾಯಮೂರ್ತಿ ಅಭಯ್ ಓಕಾ
“ನನ್ನ ತಂದೆ ಹೋದರು. ಆದರೆ, ಬೇರೆಯವರ ತಂದೆಗೆ ಈ ರೀತಿ ಆಗಬಾರದು. ಅದಕ್ಕಾಗಿ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದೇವೆ” ಎಂದು ಅವರು ಹೇಳಿರುವುದಾಗಿ ‘ಟಿಐಇ’ ವರದಿ ಮಾಡಿದೆ.
ವರದಿಯ ಪ್ರಕಾರ, ಶಿವರಾಮನ್ ಅವರ 90,000 ರೂ. ಪಿಎಫ್ ಹಣ ಇಪಿಎಫ್‌ಒ ಖಾತೆಯಲ್ಲಿತ್ತು. ಅದನ್ನು ಪಡೆಯಲು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಗುರುತಿನ ದಾಖಲೆಗಳು ಹೊಂದಿಕೆಯಾಗುತ್ತಿಲ್ಲವೆಂದು ಅಧಿಕಾರಿಗಳು ಮರುಪಾವತಿಗೆ ನಿರಾಕರಿಸಿದ್ದರು. ಅಲ್ಲದೆ, ಅವರ ಶಾಲೆಯ ಪ್ರಮಾಣ ಪತ್ರಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಅವರಿಗೆ ಅದನ್ನು ನೀಡಲು ಸಾಧ್ಯವಾಗಿರಲಿಲ್ಲ.